‘ಗುಳ್ಟೂ’ ಖ್ಯಾತಿಯ ನವೀನ್ ಶಂಕರ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಒಂದು ವರ್ಷವೇ ಆಗಿದೆ. ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’ ಕಳೆದ ವರ್ಷ ಕೊನೆಗೆ ಬಿಡುಗಡೆಯಾದ ನಂತರ, ನವೀನ್ ಅಭಿನಯದ ಯಾವೊಂದು ಚಿತ್ರವೂ ಈ ಒಂದು ವರ್ಷದಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ‘ನೋಡಿದವರು ಏನಂತಾರೆ’ ಎಂಬ ಚಿತ್ರದೊಂದಿಗೆ ನವೀನ್ ವಾಪಸ್ಸಾಗುತ್ತಿದ್ದಾರೆ.
‘ನೋಡಿದವರು ಏನಂತಾರೆ’, ನವೀನ್ ನಾಯಕನಾಗಿ ನಟಿಸಿರುವ ಚಿತ್ರ. ಈ ಚಿತ್ರವು ಜನವರಿ 31ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕುಲದೀಪ್ ಕಾರ್ಯಪ್ಪ ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ.
‘ನೋಡಿದವರು ಏನಂತಾರೆ’ ಕುರಿತು ಮಾತನಾಡುವ ಕುಲದೀಪ್, ‘ನವೀನ್ ಶಂಕರ್ ಅವರ ಪಾತ್ರ ನಮ್ಮೆಲ್ಲರ ಒಳಗಿರುವ ಒಬ್ಬ ಮನುಷ್ಯನ ಕಥೆ ಹಾಗು ಭಾವನೆಗಳನ್ನು ಹೇಳುತ್ತದೆ. ಜೀವನದಲ್ಲಿ ನಮ್ಮ ಅಸ್ತ್ವಿತ್ವದ ಬಗ್ಗೆಯೇ ನಮಗೆ ಕಾಡುವ ಪ್ರಶ್ನೆಗಳು, ಪ್ರೀತಿ, ಆತ್ಮಾವಲೋಕನ ಹಾಗೂ ಬಾಂಧವ್ಯಗಳ ಸುತ್ತ ಈ ಸಿನಿಮಾ ಸಾಗುತ್ತದೆ’ ಎನ್ನುತ್ತಾರೆ.
ಕರ್ನಾಟಕದ ಪ್ರೇಕ್ಷಣೀಯ ಹಾಗೂ ಅಪರೂಪದ ಸುಂದರ ತಾಣಗಳಲ್ಲಿ ‘ನೋಡಿದವರು ಏನಂತಾರೆ’ ಸಿನಿಮಾ ಚಿತ್ರೀಕರಣಗೊಂಡಿದೆ. ಆಶ್ವಿನ್ ಕೆನೆಡಿ ಛಾಯಾಗ್ರಾಹಕರಾಗಿ ಕೆಲಸ ಮೂಡಿದ್ದು, ಮಯೂರೆಶ್ ಅಧಿಕಾರಿ ಸಂಗೀತ ಸಂಯೋಜಿಸಿದ್ದಾರೆ. ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಎರಡು ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದು, ಸಾಧು ಕೋಕಿಲ, ಅನನ್ಯಾ ಭಟ್, ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.
‘ನೋಡಿದವರು ಏನಂತಾರೆ’ ಚಿತ್ರದಲ್ಲಿ ನವೀನ್‍ಗೆ ನಾಯಕಿಯಾಗಿ ಅಪೂರ್ವ ಭಾರದ್ವಾಜ್ ನಟಿಸಿದ್ದಾರೆ.





