ನಾಗವಲ್ಲಿಯನ್ನು ಚಿತ್ರರಂಗದವರು ಬಿಡುವ ಹಾಗೆ ಕಾಣುತ್ತಿಲ್ಲ. 1993ರಲ್ಲಿ ಬಿಡುಗಡೆಯಾದ ‘ಮಣಿಚಿತ್ರತಾಳ್’ ಚಿತ್ರದ ನಾಗವಲ್ಲಿ ಎಂಬ ಪಾತ್ರ ಅದೆಷ್ಟು ಜನಪ್ರಿಯವಾಯಿತೆಂದರೆ, ಆ ಪಾತ್ರ ಮತ್ತು ಆ ಹೆಸರು ಬರೀ ಮಲಯಾಳಂ ಚಿತ್ರರಂಗದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಜನಪ್ರಿಯವಾಗಿವೆ. ಕನ್ನಡದ ‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಚಿತ್ರಗಳಲ್ಲಿ ನಾಗವಲ್ಲಿ ಎಂಬ ಹೆಸರಿನ ಪಾತ್ರಗಳು ಬರುವುದರ ಜೊತೆಗೆ, ಆ ಹೆಸರಿನ ಚಿತ್ರ ಸಹ ಕೆಲವು ವರ್ಷಗಳ ಹಿಂದೆ ಬಂದಿತ್ತು.
ಈಗ ಕನ್ನಡದಲ್ಲಿ ‘ನಾಗವಲ್ಲಿ ಬಂಗಲೆ’ ಎಂಬ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ನಿರ್ಮಾಣವಾಗಿದೆ. ಹೆಸರು ಕೇಳಿದರೆ ಇದೊಂದು ಹಾರರ್ ಚಿತ್ರ ಎಂದನಿಸುವ ಸಾಧ್ಯತೆ ಇದೆ. ಇದು ಹಾರರ್ ಚಿತ್ರವಾ? ಈ ವಿಷಯವನ್ನು ಚಿತ್ರತಂಡವು ಬಹಿರಂಗಗೊಳಿಸಿಲ್ಲ. ಸದ್ಯಕ್ಕೆ ಚಿತ್ರ ಯಾವ ಜಾನರ್‍ಗೆ ಸೇರಿದ್ದು ಎಂಬ ವಿಷಯವನ್ನು ಮುಚ್ಚಿಟ್ಟಿದೆ. ಮಿಕ್ಕಂತೆ ಒಂದಿಷ್ಟು ವಿಷಯಗಳನ್ನು ಬಹಿರಂಗಗೊಳಿಸಿದೆ.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ‘ನಾಗವಲ್ಲಿ ಬಂಗಲೆ’ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ ‘ನಾಗವಲ್ಲಿ ಬಂಗಲೆ’ಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಈ ಚಿತ್ರದ ಕಥೆ.
‘ನಾಗವಲ್ಲಿ ಬಂಗಲೆ’ ಚಿತ್ರದ ಚಿತ್ರೀಕರಣ ಮತ್ತು ಇತರೆ ಕೆಲಸಗಳು ಮುಗಿದಿವೆ. ಅಷ್ಟೇ ಅಲ್ಲ, ಚಿತ್ರದ ಸೆನ್ಸಾರ್ ಸಹ ಆಗಿದೆ. ಈ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ‘U/A’ ಪ್ರಮಾಣ ಪತ್ರ ನೀಡಿದೆ. ಬೆಂಗಳೂರು, ನೆಲಮಂಗಲದ ಆಸುಪಾಸಿನಲ್ಲಿ ಚಿತ್ರೀಕರಣವಾಗಿದೆ.
ಹಂಸ ವಿಷನ್ಸ್ ಲಾಂಛನದಲ್ಲಿ ನೆ.ಲ ಮಹೇಶ್ ಮತ್ತು ನೇವಿ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿ ರಾಜೇಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ರೋಹನ್ ದೇಸಾಯಿ ಸಂಗೀತವಿದೆ. ಜೆ.ಎಂ. ಪ್ರಹ್ಲಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಫೆಬ್ರುವರಿಯಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿರುವ ಈ ಚಿತ್ರದಲ್ಲಿ ನೆ.ಲ. ನರೇಂದ್ರಬಾಬು, ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರು ನಟಿಸಿದ್ದಾರೆ.





