ವಿನಯ್ ರಾಜಕುಮಾರ್ ಅಭಿನಯದ ‘ಪೆಪೆ’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಚಿತ್ರ ವಿನಯ್ ಚಿತ್ರಬದುಕಿಗೆ ದೊಡ್ಡ ತಿರುವು ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ. ಇದೀಗ ವಿನಯ್ ಅಭಿನಯದ ‘ಅಂದೊಂದಿತ್ತು ಕಾಲ’ ಎಂಬ ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಈ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗುತ್ತಿದೆ.
‘ಮುಂಗಾರು ಮಳೆಯಲ್ಲಿ …’ ಎಂಬ ಹಾಡು ಇದೀಗ ಎ2 ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಿದ್ ಶ್ರೀರಾಮ್ ಧ್ವನಿಯಾದರೆ, ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ರಾಘವೇಂದ್‍ರ ವಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಇತ್ತೀಚೆಗೆ ‘ಮುಂಗಾರು ಮಳೆ’ ಚಿತ್ರದ ಜನಪ್ರಿಯ ಜೋಡಿಯಾದ ಗಣೇಶ್ ಮತ್ತು ಪೂಜಾ ಗಾಂಧಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.
ಹಾಡು ಬಿಡುಗಡೆ ಮಾಡಿ ಮಾತನಾಡಿರುವ ಗಣೇಶ್, ‘’ಮುಂಗಾರು ಮಳೆಯಲ್ಲಿ …’ ಹಾಡು ಬಹಳ ಚೆನ್ನಾಗಿದೆ. ಇತ್ತೀಚಿಗೆ ಕನ್ನಡದಲ್ಲಿ ಬಹಳಷ್ಟು ಅದ್ಭುತವಾದ ಹಾಡುಗಳು ಬರುತ್ತಿದ್ದು, ಅದರಲ್ಲಿ ಈ ಹಾಡು ಸಹ ಒಂದು. ರಾಘವೇಂದ್ರ ಸಂಗೀತ ಸಂಯೋಜಿಸಿರುವ ಈ ಹಾಡು ಮಸ್ತ್ ಆಗಿದೆ. ಸಿದ್ ಶ್ರೀರಾಮ್ ಧ್ವನಿ ಕೇಳೋದಕ್ಕೆ ಇಂಪಾಗಿದೆ. ‘ಮುಂಗಾರು ಮಳೆ’ ನಾವೆಲ್ಲಾ ಪ್ರೀತಿಯಿಂದ ಮಾಡಿದ ಚಿತ್ರವಾಗಿತ್ತು. ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿನ ನಾನು ನೋಡಿದ ಈ ‘ಮುಂಗಾರು ಮಳೆಯಲ್ಲಿ …’ ಹಾಡು ಇಂಟೆನ್ಸ್ ಆಗಿದೆ. ಈ ಹಾಡು ಬಿಡುಗಡೆ ಮಾಡಿದ ಖುಷಿ ಇದೆ. ಈ ಚಿತ್ರದ ಎಲ್ಲಾ ಹಾಡುಗಳು ಯಶಸ್ವಿಯಾಗಲಿ’ ಎಂದು ಹಾರೈಸಿದ್ದಾರೆ.
ಪೂಜಾ ಗಾಂಧಿ ಮಾತನಾಡಿ, ‘ನಾವೆಲ್ಲರೂ ಸಾಮಾನ್ಯವಾಗಿ ಅಂದೊಂದಿತ್ತು ಕಾಲ ಅಂತ ಹೇಳುತ್ತಲೇ ಇರುತ್ತೇವೆ. ನಾನು ಸಹ 2006ರಲ್ಲಿ ಬಿಡುಗಡೆಯಾಗಿದ್ದ ‘ಮುಂಗಾರು ಮಳೆ’ ಚಿತ್ರವನ್ನು, ಅದರ ಯಶಸ್ಸನ್ನು ನೆನಪು ಮಾಡಿಕೊಳ್ಳುತ್ತಿರುತ್ತೀನಿ. ಈಗ ‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಹಾಡು ಚೆನ್ನಾಗಿ ಮೂಡಿ ಬಂದಿವೆ. ‘ಮುಂಗಾರು ಮಳೆ’ ಚಿತ್ರದ ತರಹವೇ ‘ಮುಂಗಾರು ಮಳೆಯಲ್ಲಿ …’ ಹಾಡು ದೊಡ್ಡ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ವಿನಯ್ ಮತ್ತು ಅದಿತಿ ಜೊತೆಗೆ ‘ಕಡ್ಡಿಪುಡಿ’ ಚಂದ್ರು, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಭುವನ್ ಸುರೇಶ್ ನಿರ್ಮಿಸಿದರೆ, ಕಥೆ-ಚಿತ್ರಕಥೆ ಬರೆದು ಕೀರ್ತಿ ಕೃಷ್ಣ ನಿರ್ದೇಶನ ಮಾಡಿದ್ದಾರೆ.