ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ MJ (ಮಂಜುನಾಥ್ ಜಯರಾಜ್) ಇದೀಗ ಸದ್ದಿಲ್ಲದೆ ಒಂದು ಚಿತ್ರಕ್ಕೆ ಹೀರೋ ಆಗುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರ ಇದೀಗ ಸಂಪೂರ್ಣವಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, ‘ದೈವ’ ಚಿತ್ರದ ಟೀಸರನ್ನು ನಿರ್ದೇಶಕರಾದ ಗುರು ದೇಶಪಾಂಡೆ, ಹರಿ ಸಂತೋಷ್, ‘ಭರ್ಜರಿ’ ಚೇತನ್, ಜಡೇಶ್ ಕೆ. ಹಂಪಿ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ. ವಿಶ್ವನಾಥ್ ಜೊತೆಯಾಗಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದ ಕುರಿತು ಮಾತನಾಡುವ ಮಂಜುನಾಥ್ ಜಯರಾಜ್, ‘’ದೈವ’ ಎಂದ ಕೂಡಲೇ ಇದು ಪೌರಾಣಿಕ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಒಂದು ಕಮರ್ಷಿಯಲ್ ಸಿನಿಮಾ. ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಮತ್ತು ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್‍ಗಳಲ್ಲಿ ನಾನು ಅಭಿನಯಿಸಿದ್ದೇನೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸದ್ಯದಲ್ಲೇ ಮೊದಲ ಕಾಪಿ ಬರಲಿದೆ. ನಮ್ಮ ತಾಯಿ ಜಯಮ್ಮ ಪದ್ಮರಾಜ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ’ ಎಂದರು.
‘ದೈವ’ ಚಿತ್ರದಲ್ಲಿ ಸುರಭಿ, ನೀತು ರಾಯ್, ಬಲ ರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಜೇತ್ ಮಂಜಯ್ಯ ಮತ್ತು ಸಿದ್ಧಾರ್ಥ್ ಅವರ ಛಾಯಾಗ್ರಹಣವಿದೆ.





