‘ಮಾರ್ಟಿನ್’ ಚಿತ್ರತಂಡದವರ ಮಧ್ಯೆ, ಎಲ್ಲವೂ ಸರಿ ಇಲ್ಲ ಎಂಬುದನ್ನು ಬಾಯಿಬಿಟ್ಟು ಹೇಳಬೇಕಾಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಚಿತ್ರತಂಡದವರ ನಡುವೆ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಉದಾಹರಣೆ. ಮೊದಲು ನಿರ್ಮಾಪಕರು ಮತ್ತು ನಿರ್ದೇಶಕರ ನಡುವಿನ ಕಿತ್ತಾಟ ವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಾಜಿ-ಪಂಚಾಯ್ತಿಗಳಾದವು. ಆ ನಂತರ ನಿರ್ದೇಶಕ ಎ.ಪಿ. ಅರ್ಜುನ್ ಮೇಲೆ ಲಂಚದ ಆರೋಪ ಕೇಳಿ ಬರುತ್ತಿವೆ. ಹೀಗಿರುವಾಗಲೇ ಚಿತ್ರದ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಚಿತ್ರತಂಡ ಮುಂದಾಗಿದೆ.
ಈ ಸಮಾರಂಭ ಮುಂಬೈನಲ್ಲಿ ಆಗಸ್ಟ್ 05ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಚಿತ್ರದ ಮೊದಲ ಟ್ರೇಲರ್ ಬಿಡುಗಡೆ ಮಾಡಲಾಗುತ್ತದಂತೆ. ಅಂದು ಸಂಜೆ 5.55ಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬಂಗಾಲಿ, ಅರೇಬಿಕ್, ರಷ್ಯನ್, ಕೊರಿಯಾ, ಚೈನೀಸ್, ಇಂಗ್ಲೀಷ್ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗುತ್ತಿದೆ.
ಈ ಸಂದರ್ಭದಲ್ಲಿ ದೇಶದ ಬೇರೆಬೇರೆ ರಾಜ್ಯಗಳ ಸಿನಿಮಾ ಪತ್ರಕರ್ತರಲ್ಲದೆ, ಒಟ್ಟು 21 ದೇಶಗಳ ಪ್ರತಿನಿಧಿಗಳು ಚಿತ್ರದ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಚಿತ್ರವೊಂದರ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿ ನಡೆಯಲಿದ್ದು, ಅದಕ್ಕೆ ‘ಮಾರ್ಟಿನ್’ ಕಾರಣವಾಗುತ್ತಿರುವುದು ವಿಶೇಷ. ಈ ಪತ್ರಿಕಾಗೋಷ್ಠಿಯಲ್ಲಿ ಅಮೇರಿಕಾ, ಇಂಗ್ಲೆಂಡ್, ದುಬೈ, ಕೊರಿಯಾ, ಜಪಾನ್, ರಷ್ಯಾ, ಮಲೇಷ್ಯಾ ಸೇರಿದಂತೆ 21 ದೇಶಗಳ 27 ಪತ್ರಕರ್ತರು ಭಾಗವಹಿಸುತ್ತಿದ್ದಾರೆ.
ಇದಕ್ಕೂ ಮೊದಲು ಒಂದು ದಿನ ಮುಂಚೆ ಆಗಸ್ಟ್ 04ರಂದು ಚಿತ್ರದ ಕನ್ನಡ ಟ್ರೇಲರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಹಿಂದೆ, ಚಿತ್ರತಂಡವು ಚಿತ್ರದ ಟೀಸರ್ ಅನ್ನು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅದೇ ವೀರೇಶ್ ಚಿತ್ರಮಂದಿರದಲ್ಲಿ ಆಗಸ್ಟ್ 04ರ ಮಧ್ಯಾಹ್ನ ಅಭಿಮಾನಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.
‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ನವಾಬ್ ಷಾ, ಜಿಯಾರ್ಜಿಯಾ ಆ್ಯಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ವಾಸವಿ ಎಂಟರ್‍ಪ್ರೈಸಸ್ ಸಂಸ್ಥೆಯಡಿ ಉದಯ್ ಮೆಹ್ತಾ ನಿರ್ಮಿಸಿದ್ದು, ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಎ.ಪಿ. ಅರ್ಜುನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.