Mysore
23
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಾರ್ಷಲ್‍ ಆರ್ಟ್ಸ್ ಪಟು ಈಗ ನಿರ್ದೇಶಕ; ‘ಮದ್ದಾನೆ’ ಪ್ರಾರಂಭ

ಕನ್ನಡ ಚಿತ್ರರಂಗಕ್ಕೆ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹಲವರು ಇತ್ತೀಚಿನ ದಿನಗಳಲ್ಲಿ ಬರುತ್ತಿದ್ದಾರೆ. ಈಗ ಆ ಸಾಲಿಗೆ ಸತೀಶ್‍ ಕುಮಾರ್‍ ಸಹ ಸೇರಿದ್ದಾರೆ. ಮೂಲತಃ ಮಾರ್ಷಲ್ ಆರ್ಟ್ಸ್ ಪಟುವಾಗಿರುವ ಸತೀಶ್‍, ಇದುವರೆಗೂ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ. ಬೆಂಗಳೂರಿನ ಕೆಲವು ಕಡೆ ಮಾರ್ಷಲ್ ಆರ್ಟ್ಸ್ ತರಭೇತಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಇದೀಗ ಅವರು ‘ಮದ್ದಾನೆ’ ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದಾರೆ.

‘ಮದ್ದಾನೆ’ ಚಿತ್ರದಲ್ಲಿ ನಿಹಾಲ್‍ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ಪ್ಯಾಂಥರ್ಸ್ ಕ್ರಿಯೇಟಿವ್ ಸಿನಿಮಾಸ್ ಲಾಂಛನದಲ್ಲಿ ಸತೀಶ್‍ ಅವರ ಪತ್ನಿ ರಂಜನ ಎಂ ಕುಮಾವತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕರಾದ ಕೆ.ಮಂಜು , ರಮೇಶ್ ಯಾದವ್ ಹಾಗೂ ‘ಕಡ್ಡಿಪುಡಿ’ ಚಂದ್ರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

‘ಮದ್ದಾನೆ’ ಕುರಿತು ಮಾತನಾಡುವ ನಿರ್ದೇಶಕ ಸತೀಶ್ ಕುಮಾರ್, ‘ಇದೊಂದು ಹಳ್ಳಿ ಹಾಗೂ ಕಾಡಿನ ನಡುವೆ ನಡೆಯುವ ಕಥೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿಕ್ಕಮಗಳೂರಿನಲ್ಲೇ ನಡೆಯುತ್ತದೆ. ನಿಹಾಲ್ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ನಾನು ಚಿಕ್ಕಮಗಳೂರಿಗೆ ಟೂರ್ನಿಗೆಂದು ಹೋದಾಗ, ಅಲ್ಲಿ ನೋಡಿದ ಮತ್ತು ಕೇಳಿದ ಕೆಲವು ಘಟನೆಗಳನ್ನು ಬೆಳೆಸಿ ಕಥೆ ಮಾಡಿದ್ದೇನೆ. ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ’ ಎಂದರು.

ಇನ್ನು, ನಿರ್ದೇಶನದ ಬಗ್ಗೆ ಅವರಿಗೆ ಯಾವುದೇ ಅನುಭವ ಇಲ್ಲದಿದ್ದರೂ, ಒಂದಿಷ್ಟು ಕಲಿತು ಬಂದಿದ್ದಾರಂತೆ. ‘ನಾನೊಬ್ಬ ಪ್ರೇಕ್ಷಕ. ಸಾಕಷ್ಟು ಚಿತ್ರಗಳನ್ನು ನೊಡಿದ್ದೇನೆ. ಚಿತ್ರ ಮಾಡಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇತ್ತು. ಇನ್ನು, ನಿರ್ದೇಶನದ ಬಗ್ಗೆ ಕೆಲವು ವಿಷಯಗಳನ್ನು ಕಲಿತು ನಿರ್ದೇಶನ ಮಾಡುತ್ತಿದ್ದೇನೆ. ಒಳ್ಳೆಯ ಚಿತ್ರತಂಡ ಜೊತೆಗಿದೆ. ಒಂದೊಳ್ಳೆಯ ಚಿತ್ರ ಮಾಡುವ ನಂಬಿಕೆ ಇದೆ’ ಎಂದರು.

ನಿಹಾಲ್‍ ರಾಜ್ ಮೂಲತಃ ರಂಗಭೂಮಿವರಂತೆ. ‘ಇದಕ್ಕೂ ಮೊದಲು ‘ರಾಣಾ’ ಹಾಗೂ ‘ವಿಷ್ಣುಪ್ರಿಯ’ ಚಿತ್ರಗಳಲ್ಲಿ ನಟಿಸಿದ್ದೇನೆ. ಕೆ. ಮಂಜು ಅವರ ಸಹಕಾರ ಮೊದಲಿನಿಂದಲೂ ಇದೆ. ಇಂದು ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೂ ಬಂದು ಅವರು ಹಾರೈಸಿದ್ದು ಸಂತೋಷವಾಗಿದೆ’ ಎಂದರು.

‘ಮದ್ದಾನೆ’ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣ, ಸ್ವಾಮಿನಾಥನ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ. ಈ ಚಿತ್ರದಲ್ಲಿ ಅರವಿಂದ್ ರಾವ್ ಒಂದು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತಿದೆ.

Tags:
error: Content is protected !!