Mysore
21
broken clouds

Social Media

ಗುರುವಾರ, 10 ಅಕ್ಟೋಬರ್ 2024
Light
Dark

‘ತಾಯಿನೇ ದೇವರ?’ ಎಂದು ಕೇಳುತ್ತಿದ್ದಾರೆ ಮಾಲಾಶ್ರೀ

ಹಿರಿಯ ನಟಿ ಮಾಲಾಶ್ರೀ ಇತ್ತೀಚೆಗಷ್ಟೇ ‘ಪೆನ್‍ ಡ್ರೈವ್‍’ ಇಟ್ಟುಕೊಂಡು ತನಿಖೆ ಮಾಡುವುದಕ್ಕೆ ಹೊರಟಿದ್ದರು. ‘ಮೆಜೆಸ್ಟಿಕ್ 2’ ಚಿತ್ರದಲ್ಲಿ ನಾಯಕನೊಂದಿಗೆ ಹೆಜ್ಜೆ ಹಾಕಿದ್ದರು. ಈಗ ‘ತಾಯಿನೇ ದೇವರ?’ ಎಂದು ಕೇಳುತ್ತಿದ್ದಾರೆ.

ಪ್ರಪಂಚದಲ್ಲಿ ತಾಯಿಯನ್ನು ದೇವರಿಗೆ ಹೋಲಿಸುತ್ತಾರೆ. ಈ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು ’ತಾಯಿನೇ ದೇವರ?’ ಎಂಬ ಚಿತ್ರ ಪ್ರಾರಂಭವಾಗಿದೆ. ಮಾಗಡಿ ರಸ್ತೆಯ ಲಕ್ಷೀಪುರದಲ್ಲಿರುವ ’ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ’ದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.

ಈ ಚಿತ್ರವನ್ನು ಡಾ. ಸಾಯಿ ಸತೀಶ್ ತೋಟಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ 16 ವರ್ಷ ಅನುಭವವಿರುವ ಅವರು, ಕಳೆದ ಎಂಟು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದರಂತೆ. ಈಗ ಶ್ರೀ ಸಾಯಿಶಕ್ತಿ ಸಿನಿ ಕಂಬೈನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅಭಿಮಾನ್ ಎಚ್. ಕಾಗಿನಲ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಅಮ್ಮ, ಮಗಳ ಪ್ರೇರಣೆ ಇಟ್ಟುಕೊಂಡು ಬರೆದೆ ಕಥೆ ಇದು ಎನ್ನುವ ಅವರು, ‘ವಾಸ್ತವವಾಗಿ ಎಲ್ಲರ ಮನೆಯಲ್ಲಿ ಏನು ನಡೆಯುತ್ತದೋ ಅದನ್ನೇ ತೋರಿಸುತ್ತಿದ್ದೇನೆ. ಮೂರು ತಾಯಂದರ ಸುತ್ತ ಚಿತ್ರವು ಸಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಭವ್ಯ ನಟಿಸುತ್ತಿದ್ದಾರೆ. ಮಾಲಾಶ್ರೀ ಪವರ್ ಫುಲ್ ಪೋಲೀಸ್ ಅಧಿಕಾರಿಯಾಗಿ, ಇಲ್ಲಿಯವರೆಗೂ ಕಾಣಿಸದ ರೀತಿಯಲ್ಲಿ ಇರುತ್ತಾರೆ. ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಮ್ಮನ ಮಗಳು ಅನ್ವಿತಾ ಮೂರ್ತಿ ನಾಯಕಿಯರಲ್ಲಿ ಒಬ್ಬರಾಗಿರುತ್ತಾರೆ. ನೋಡುಗರು ಒಂದು ಟಿಕೆಟ್ ತೆಗೆದುಕೊಂಡರೆ, ಎರಡು ಸಿನಿಮಾ ನೋಡಿದಂತೆ ಅನಿಸುತ್ತದೆ’ ಎಂದರು.

ಈ ಚಿತ್ರದಲ್ಲಿ ಮೂವರು ನಾಯಕರು, ಮೂವರು ನಾಯಕಿಯರು ಇರುತ್ತಾರಂತೆ. ಈ ಪೈಕಿ ಒಬ್ಬ ನಾಯಕ, ನಾಯಕಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇವರೊಂದಿಗೆ ದೊಡ್ಡಣ್ಣ, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಬಾಲರಾಜ್, ಸ್ವಾತಿ ಗುರುದತ್, ರೇಖದಾಸ್, ಅಪೂರ್ವ, ಅನ್ವಿತಾ ಮೂರ್ತಿ, ಜೀವಿತಾ ಪ್ರಕಾಶ್, ರಾಜ್‌ಮನೀಶ್, ಗಣೇಶ್, ಪಂಕಜ, ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳು ಇರಲಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.

ಮಾಲಾಶ್ರೀ ಇದರಲ್ಲೂ ಪೊಲೀಸ್‍ ಅಧಿಕಾರಿಯೊಂದಿಗೆ ಕಾಣಿಸಿಕೊಂಡರೂ, ಇದರಲ್ಲಿ ಅವರ ಪಾತ್ರ ಬೇರೆಯದೇ ಇರುತ್ತದಂತೆ. ‘ಇಷ್ಟು ವರ್ಷ ಪೋಲೀಸ್ ಆಫೀಸರ್ ಆಗಿ ವಿಲನ್‌ಗಳೊಂದಿಗೆ ಸೆಣಸಾಡುತ್ತಿದ್ದೆ. ಇದರಲ್ಲಿ ಹೆಚ್ಚು ಮಹಿಳೆಯರೊಂದಿಗೆ ಸನ್ನಿವೇಶಗಳು ಬರಲಿದೆ. ’ಹೃದಯ ಹಾಡಿತು’, ’ಸೋಲಿಲ್ಲದ ಸರದಾರ’ ನಂತರ ಭವ್ಯ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಂತಸ ತಂದಿದೆ’ ಎಂದರು ಮಾಲಾಶ್ರೀ.

Tags: