Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ತಾತನ ಲಂಗೋಟಿ, ಮೊಮ್ಮಗನ ಅಂಡರ್‌ವೇರ್ ಸುತ್ತ…

ಕನ್ನಡದಲ್ಲಿ ಇತ್ತೀಚೆಗೆ ಹಲವು ಪ್ರಯೋಗಗಳಾಗುತ್ತಿವೆ. ಇದೀಗ ನಿರ್ದೇಶಕ ಸಂಜೋತಾ ಭಂಡಾರಿ ತಾತನ ಲಂಗೋಟಿ ಮತ್ತು ಮೊಮ್ಮಗನ ಅಂಡರ್‍ವೇರ್ ಸುತ್ತ ಒಂದು ಸಂಘರ್ಷದ ಕಥೆಯನ್ನು ಮಾಡಿಕೊಂಡಿದ್ದಾರೆ. ಆ ಕಥೆಗೆ ಅವರು ಲಂಗೋಟಿ’ ಮ್ಯಾನ್‍ ಎಂದು ಹೆಸರಿಟ್ಟಿದ್ದು, ಇತ್ತೀಚೆಗೆ ಟ್ರೇಲರ್‍ ಬಿಡುಗಡೆಯಾಗಿದೆ.

‘ಲಂಗೋಟಿ ಮ್ಯಾನ್‍’ ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ನಾಯಕ ಲಂಗೋಟಿ ತೊಟ್ಟು ಓಡುವ ದೃಶ್ಯದ ಬಗ್ಗೆ ವಿವಾದವಾಗಿತ್ತು. ಈ ವಿಷಯದಲ್ಲಿ ವಿವಾದ ಯಾಕೆ ಮಾಡಲಾಗುತ್ತಿದೆಯೋ ಗೊತ್ತಿಲ್ಲ ಎನ್ನುತ್ತಾರೆ ನಿರ್ದೇಶಕಿ ಸಂಜೋತ ಭಂಡಾರಿ. ‘’ಲಂಗೋಟಿ ಮ್ಯಾನ್’ ಚಿತ್ರವು ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಈ ಚಿತ್ರದಲ್ಲಿ ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ದೃಶ್ಯಗಳಲ್ಲಿ ಆ ಉದ್ದೇಶವೂ ನಮಗಿಲ್ಲ’ ಎಂದರು.

ಈ ಚಿತ್ರದಲ್ಲಿ ಆಕಾಶ್ ರಾಂಬೋ ನಾಯಕನ ಪಾತ್ರ ಮಾಡಿದ್ದಾರೆ. ಇದು ತಾತ ಮೊಮ್ಮಗನ ಸುತ್ತ ನಡೆಯುವ ಕಥೆ ಎನ್ನುವ ಆಕಾಶ್‍, ‘ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ‌ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ’ ಎಂದರು.

ಸಂಹಿತ ವಿನ್ಯಾ ಇತ್ತೀಚಿನ ದಿನಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ‘ಲಂಗೋಟಿ ಮ್ಯಾನ್‍’ ಸಹ ಒಂದು. ಈ ಚಿತ್ರದಲ್ಲಿ ಅವರು ಪೊಲೀಸ್‍ ಅಧಿಕಾರಿಯ ಪಾತ್ರ ಮಾಡಿದ್ದಾರಂತೆ. ‘ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದರ ಬಗ್ಗೆ ಗುಟ್ಟು ಬಿಟ್ಟುಕೊಡುವುದಿಲ್ಲ. ಅದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರ ನೋಡದೆ ಯಾರೂ, ಯಾವುದೇ ತೀರ್ಮಾನಕ್ಕೆ ಬರಬಾರದು.. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಈ ಶೀರ್ಷಿಕೆ ಇಡಲಾಗಿದೆ ಎಂದು ಗೊತ್ತಾಗಲಿದೆ’ ಎಂದರು.

ಹುಲಿ ಕಾರ್ತಿಕ್ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ‘ಈ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಗಂಭೀರವಾದ ವಿಷಯಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದರು .

ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಕಿರಣ್‍ ಕೃಷ್ಣಮೂರ್ತಿ ಸಂಗೀತ, ರವಿವರ್ಮ (ಗಂಗು) ಅವರ ಛಾಯಾಗ್ರಹಣವಿದೆ. ‘ಲಂಗೋಟಿ ಮ್ಯಾನ್‍’ ಚಿತ್ರವು ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Tags: