ಮಡಿಕೇರಿ: ತಮ್ಮ ನಟನೆಯಿಂದಲೇ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣಗೆ ಭದ್ರತೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಗೃಹ ಇಲಾಖೆಗೆ ಕೊಡವ ಸಮುದಾಯದಿಂದ ಪತ್ರ ಬರೆಯಲಾಗಿದೆ.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ನಮ್ಮ ಕೊಡಗು ಮೂಲದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ರಶ್ಮಿಕಾ ಅವರು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಯಶಸ್ಸನ್ನು ಸಹಿಸದ ಕೆಲವರು ವಿನಾಕಾರಣ ಅವರನ್ನು ಟೀಕೆ ಮಾಡುವ ಮೂಲಕ ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಎಲ್ಲರೂ ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ರಶ್ಮಿಕಾ ಅವರು ಕೊಡವ ಸಮಾಜಕ್ಕೆ ಸೇರಿದ್ದಾರೆ ಎಂಬ ಕಾರಣದಿಂದಲೇ ಹೀಗೆಲ್ಲಾ ಟೀಕೆ ಮಾಡುತ್ತಿದ್ದಾರೆ ಎಂಬ ಅರ್ಥ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.





