‘ಮೇಘ’ ಚಿತ್ರದ ಬಿಡುಗಡೆಯ ನಂತರ ಕಿರುತೆರೆಯಲ್ಲಿ ‘ಕರ್ಣ’ನಾಗಿರುವ ಕಿರಣ್ ರಾಜ್, ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದೊಂದಿಗೆ ಬರುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಅವರು ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ.
ಈ ಹಿಂದೆ ಕಿರಣ್ ರಾಜ್ ಅಭಿನಯದ ‘ಬಡ್ಡೀಸ್’ ಮತ್ತು ‘ರಾನಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುತೇಜ್ ಶೆಟ್ಟಿ, ಈಗ ಫ್ಯಾಮಿಲಿ ಸೆಂಟಿಮೆಂಟ್ ಒಳಗೊಂಡ ಥ್ರಿಲ್ಲರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಚಿತ್ರಕ್ಕೆ ‘ಜಾಕಿ 42’ ಎಂಬ ಹೆಸರಿಡಲಾಗಿದ್ದು, ಮೇ.15ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
‘ರಾನಿ’ ಯಲ್ಲಿ ಲಾಂಗ್ ಹಿಡಿದಿದ್ದ ಕಿರಣ್ ರಾಜ್, ಈಗ ಕುದುರೆ ಏರಿ ಜಾಕಿಯಾಗಿದ್ದಾರೆ. ಇದೊಂದು ರೇಸ್ ಹಿನ್ನೆಲೆಯ ಕಥೆಯಾಗಿದ್ದು, ಎಲ್ಲಾ ಕಮರ್ಷಿಯಲ್ ಅಂಶಗಳೂ ಚಿತ್ರದಲ್ಲಿ ಇವೆಯಂತೆ. ಇತ್ತೀಚೆಗೆ ‘ಜಾಕಿ 42’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ರೇಸ್‍ನಲ್ಲಿ ಜಾಕಿಯೊಬ್ಬ ಕುದುರೆ ಓಡಿಸುತ್ತಿರುವ ದೃಶ್ಯವಿದ್ದು, ಕುದುರೆಯ ಕೆಳಗೆ 500 ರೂ.ಗಳ ನೋಟುಗಳ ಬಂಡಲ್ ಇದೆ.
ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ‘ಜಾಕಿ 42’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಬರವಣಿಗೆ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಅಲ್ಲದೆ ವಿದೇಶದಲ್ಲೂ ಚಿತ್ರೀಕರಣ ನಡೆಯಲಿದೆ.
ನಿರ್ಮಾಪಕರನ್ನು ಹೊರತುಪಡಿಸಿ, ‘ರಾನಿ’ಯಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್.ಬಿ ಸಂಕಲನ ಈ ಚಿತ್ರಕ್ಕಿದೆ.