‘ಏಪ್ರಿಲ್ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್.16ರಂದು ಏನು ಎಂದು ಅಭಿಮಾನಿಗಳು ಹುಳ ಬಿಟ್ಟುಕೊಂಡರು. ಕೆಲವರು ಚಿತ್ರದ ಮುಹೂರ್ತವಿರಬಹುದು ಎಂದರೆ, ಇನ್ನೂ ಕೆಲವರು ಇನ್ನೇನೋ ಘೋಷಣೆ ಇರಬಹುದು ಅಂದುಕೊಂಡರು.
ಈಗ ಏಪ್ರಿಲ್.16ಕ್ಕೆ ಏನಾಗಲಿದೆ ಎಂದು ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ‘ಏಪ್ರಿಲ್.16ರಂದು ಏನಾಗಲಿದೆ ಎಂಬ ಕುತೂಹಲವಿರುವವರಿಗೆ, ಅಂದು ನಮ್ಮ ‘ಬಿಲ್ಲ ರಂಗ ಭಾಷಾ’ ಚಿತ್ರ ಪ್ರಾರಂಭವಾಗಲಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.
ಕಳೆದ ವರ್ಷ ಸುದೀಪ್ ಹುಟ್ಟುಹಬ್ಬದಂದು ಹೊಸ ಸುದ್ದಿಯೊಂದನ್ನು ಘೋಷಿಸುವುದಾಗಿ ಹೇಳಿದ್ದರು ನಿರ್ದೇಶಕ ಅನೂಪ್ ಭಂಡಾರಿ. ಅದರಂತೆ, ಅದು ‘ಬಿಲ್ಲ ರಂಗ ಭಾಷಾ’ ಚಿತ್ರದ ಅಧಿಕೃತ ಘೋಷಣೆಯಾಗಿತ್ತು. ಆದರೆ, ಸುದೀಪ್ ಆ ನಂತರ ‘ಬಿಗ್ ಬಾಸ್’, ‘ಮ್ಯಾಕ್ಸ್’, ಸಿಸಿಎಲ್‍ನಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರವು ವಿಳಂಬವಾಯಿತು. ಈಗ ಕೊನೆಗೂ ಚಿತ್ರ ಏಪ್ರಿಲ್.16ಕ್ಕೆ ಪ್ರಾರಂಭವಾಗುತ್ತಿದೆ.
‘ಬಿಲ್ಲ ರಂಗ ಭಾಷಾ ತಮ್ಮ ಜೀವನದಲ್ಲೇ ದೊಡ್ಡ ಚಿತ್ರವಾಗಲಿದೆ ಎಂದು ಸುದೀಪ್ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು. ’ವಿಕ್ರಾಂತ್ ರೋಣ’ ನಂತರ ಒಂದು ತಂಡವಾಯಿತು. ನಮಗೆ ನಮ್ಮ ಮೇಲೆ ನಂಬಿಕೆ ಬಂತು. ಈಗ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಕೈ ಹಾಕಿದ್ದೇವೆ. ಈ ಚಿತ್ರ ನನ್ನ ಮತ್ತು ಅನೂಪ್ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾ ಆಗಲಿದೆ. ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಸಾಕಷ್ಟು ಸಮಯವಾಯಿತು. ಇದೊಂದು ಅಪರೂಪದ ಚಿತ್ರವಾಗಲಿದೆ’ ಎಂದು ಅವರು ಹೇಳಿದ್ದರು.
ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲ ‘ಹನುಮಾನ್’ ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಹೆಸರುಗಳನ್ನು ಚಿತ್ರತಂಡ ಸದ್ಯದಲ್ಲೇ ಘೋಷಿಸಲಿದೆ.





