Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ದೀಪಾವಳಿಗೂ ಬರದ ‘ಕೆಡಿ – ದಿ ಡೆವಿಲ್‍’; ಶಿವರಾತ್ರಿಗೆ ಬರ್ತಾನಾ?

ದಸರಾಗೆ ಬರದಿದ್ದರೇನಂತೆ, ‘ಕೆಡಿ – ದಿ ಡೆವಿಲ್‍’ ಚಿತ್ರವು ದೀಪಾವಳಿಗೆ ಬರೋದು ಗ್ಯಾರಂಟಿ ಎಂದು ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದರು. ಆದರೆ, ಚಿತ್ರ ದಸರಾಗೂ ಬರಲಿಲ್ಲ, ದೀಪಾವಳಿಗೂ ಬರಲಿಲ್ಲ. ಇದೀಗ ಶಿವರಾತ್ರಿ ಹೊತ್ತಿಗೆ ಚಿತ್ರ ಬಿಡುಗಡೆಯಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಹೌದು, ಮೂಲಗಳ ಪ್ರಕಾರ, ಮುಂದಿನ ವರ್ಷ ಫೆಬ್ರವರಿ 13ರಂದು ಶಿವರಾತ್ರಿ ಪ್ರಯುಕ್ತ ‘ಕೆಡಿ – ದಿ ಡೆವಿಲ್‍’ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕನ್ನಡ ಚಿತ್ರರಂಗದ ವಲಯದಲ್ಲಿ ಇದೆ. ಆದರೆ, ಪ್ರೇಮ್‍ ಇದುವರೆಗೂ ಈ ಕುರಿತಾಗಿ ಯಾವುದೇ ಅಧಿಕೃತ ಪ್ರಕಟಣೆಯ್ನೂ ಹೊರಡಿಸಿಲ್ಲ. ಇತ್ತೀಚೆಗೆ ಒಂದು ಸಮಾರಂಭದಲ್ಲಿ ಸುದೀಪ್‍ ಸಹ ಚಿತ್ರ ವಿಳಂಬವಾಗುತ್ತಿರುವ ವಿಷಯವಾಗಿ ಪ್ರೇಮ್‍ ಕಾಲೆಳೆದಿದ್ದರು. ‘ಪ್ರೇಮ್‍ಗೆ ಬಿಟ್ಟರೆ, ಅವರು ಮುಂದಿನ ವರ್ಷದ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೂ ಆಶ್ಚರ್ಯವಿಲ್ಲ. ಆದರೆ, ಈಗಾಗಲೇ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆಯಂತೆ. ಕಾರ್ಯಕಾರಿ ನಿರ್ಮಾಪಕ ಸುಪ್ರೀತ್‍ ಒಂದು ಡೇಟ್‍ ಹೇಳಿದ್ದಾರೆ. ಆ ದಿನವಾದರೂ ಚಿತ್ರ ಬಿಡುಗಡೆಯಾಗುತ್ತದಾ ಎಂದು ಕಾದು ನೋಡಬೇಕು’ ಎಂದು ಕಿಚಾಯಿಸಿದ್ದರು.

ಇನ್ನು, ಚಿತ್ರದಲ್ಲಿ ಸುದೀಪ್‍ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಸುದೀಪ್‍, ಇತ್ತೀಚೆಗೆ ‘ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ನಿಜಕ್ಕೂ ನಟಿಸಿದ್ದು, ಹೈದರಾಬಾದ್‍ನಲ್ಲಿ ನಡೆದ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದಾರೆ. ಸುದೀಪ್‍ ನಟಿಸುತ್ತಿರುವ ವಿಷಯವನ್ನು ಚಿತ್ರತಂಡದವರೇ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

‘ಕೆಡಿ – ದಿ ಡೆವಿಲ್‍’ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಚಿತ್ರಕ್ಕಿದೆ.

Tags:
error: Content is protected !!