ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಕನ್ನಡದ ಖ್ಯಾತ ನಟ ದರ್ಶನ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕಲಾವಿದರ ಸಂಘದ ಜೊತೆಗೆ ಚರ್ಚಿಸಿ ಬಳಿಕ ತೀರ್ಮಾನಿಸಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಎನ್.ಎಂ ಸುರೇಶ್ ಬುಧವಾರ (ಜೂನ್.12) ಹೇಳಿದ್ದಾರೆ.
ಕೊಲೆ ಪ್ರಕರಣ ಆರೋಪಿ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕೆಎಫ್‌ಸಿಸಿ ಯನ್ನು ಒತ್ತಾಯಿಸಿದೆ. ದರ್ಶನ್ ಸಿನಿಮಾ ಬಿಡುಗಡೆ ಮಾಡಬಾರದು ಆತನನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬಂದ ಹಿನ್ನೆಲೆ ಈ ರೀತಿ ಉತ್ತರಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ರೇಣುಕಾಸ್ವಾಮಿ ಕುಟುಂಬಕ್ಕೆ ನಮ್ಮ ಸಾಂತ್ವಾನಗಳು. ಚಲನಚಿತ್ರ ಮಂಡಳಿ ಸುಮ್ಮನಿದೆ ಎಂದು ಯಾರೂ ಊಹಿಸಬೇಡಿ. ಇದನ್ನು ನಾವು ಒಪ್ಪುವುದಿಲ್ಲ. ಬೆಂಗಳೂರು ಕಮಿಷನರ್ ಅವರು ಈ ಪ್ರಕಣದಲ್ಲಿ ಕಾನೂನಾತ್ಮ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ತರುವುದಾಗಿ ಹೇಳಿದ್ದಾರೆ. ಈ ಪ್ರಕಣದಲ್ಲಿ ತಪ್ಪಿತಸ್ಥರ ವಿರದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಸುರೇಶ್ ಹೇಳಿದರು.
ಪೊಲೀಸ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸುವವರೆಗೂ ಆರೋಪಿ ಯಾರು ಎಂದು ಪತ್ತೆಯಾಗುವುದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್‌ಶಿಟ್ ಸಲ್ಲಿಸಿದ ಬಳಿಕ ನಾವು ಕಲಾವಿದರ ಸಂಘದೊಂದಿಗೆ ಸಭೆ ಕರೆದು ಬಳಿಕ ತೀರ್ಮಾನ ಮಾಡಲಾಗುವುದು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಇಂತಹ ಪ್ರಕರಣಗಳಿಂದ ಕನ್ನಡ ಚಿತ್ರರಂಗದ ಖ್ಯಾತಿ ಕುಗ್ಗುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಅಧ್ಯಕ್ಷ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.