ಶರಣ್ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ‘ಮರ್ಯಾದೆ ಪ್ರಶ್ನೆ’, ‘ಟಕಿಲಾ’ ಮುಂತಾದ ಚಿತ್ರಗಳಿಗೆ ಹಾಡು ಹಾಡಿದ್ದರು. ಇದೀಗ ಅವರು ಪ್ರಣಂ ದೇವರಾಜ್ ಅಭಿನಯದ ‘S/O ಮುತ್ತಣ್ಣ’ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.
‘S/O ಮುತ್ತಣ್ಣ’ ಚಿತ್ರದ ‘ಕಮಂಗಿ ನನ್ ಮಗನೇ …’ ಎಂಬ ಹಾಡಿಗೆ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಧ್ವನಿಯಗಿದ್ದಾರೆ. ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಈ ಹಾಡು ಮೇ.17 ರಂದು ಬಿಡುಗಡೆಯಾಗಲಿದೆ.
ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘S/O ಮುತ್ತಣ್ಣ’ ಚಿತ್ರವು ತಂದೆ-ಮಗನ ಬಾಂಧವ್ಯದ ಸುತ್ತ ಸುತ್ತುವ ಚಿತ್ರವಾಗಿದ್ದು, ರಂಗಾಯಣ ರಘು ಅಪ್ಪನಾಗಿ ನಟಿಸಿದರೆ, ಪ್ರಣಂ ದೇವರಾಜ್ ಮಗನಾಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಪ್ರಣಂ ದೇವರಾಜ್, ‘ಮನುಷ್ಯ ತಂದೆಯಾಗುವ ಮುಂಚೆ ಸಾಮಾನ್ಯ ಮನುಷ್ಯ. ಹೆಂಡ್ತಿ, ಕೆಲಸ, ಮನೆ ನೋಡಿಕೊಳ್ಳುತ್ತಾನೆ. ಆದರೆ, ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ-ಮಗನ ಬಾಂಧವ್ಯವನ್ನು ಹೇಗೆ ಇರುತ್ತದೆ ಎನ್ನುವುದನ್ನು ‘ಸನ್ ಆಫ್ ಮುತ್ತಣ್ಣ’ದಲ್ಲಿ ತೋರಿಸಲಾಗಿದೆ’ ಎಂದು ಹೇಳುತ್ತಾರೆ.
ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ‘ಸನ್ ಆಫ್ ಮುತ್ತಣ್ಣ’ ಚಿತ್ರದಲ್ಲಿ ಪ್ರಣಂಗೆ ನಾಯಕಿಯಾಗಿ ಖುಷಿ ರವಿ ಅಭಿನಯಿಸಿದ್ದು, ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘S/o ಮುತ್ತಣ್ಣ’ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಮತ್ತು ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಈ ಚಿತ್ರಕ್ಕಿದೆ.





