ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಹಣಕಾಸಿನ ವಿಷಯದಲ್ಲಿ ದೊಡ್ಡ ಸದ್ದು ಮಾಡದ ಮತ್ತು ಕಂಟೆಂಟ್ ವಿಷಯದಲ್ಲಿ ಗಮನಸೆಳೆದ ಚಿತ್ರಗಳೆಂದೆರೆ ಅದು ‘ಬ್ಲಿಂಕ್’ ಮತ್ತು ‘ಶಾಖಾಹಾರಿ’. ಆ ಚಿತ್ರಗಳ ನಂತರ ಆ ನಿರ್ಮಾಪಕರು, ಹೊಸ ಚಿತ್ರಗಳನ್ನು ನಿರ್ಮಿಸದಿದ್ದರೂ, ಒಂದಿಷ್ಟು ಚಿತ್ರಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ’ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು, ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಬಿಡುಗಡೆಗೆ ಕೈಜೋಡಿಸಿದ್ದಾರೆ.
ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಮುಗಿದು ಹಲವು ಸಮಯವಾದರೂ, ಚಿತ್ರವು ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ‘ಬ್ಲಿಂಕ್’ ನಿರ್ಮಾಪಕ ರವಿಚಂದ್ರ ಎ.ಜೆ ಮತ್ತು ‘ಶಾಖಾಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಮೂಲಕ ಚಿತ್ರಕ್ಕೆ ಮತ್ತೆ ಜೀವ ಬಂದಿದೆ.
ಇದನ್ನೂ ಓದಿ:- ಶಂಕರನ ಮಗ ಹಾಗೂ ಸಿಂಬನ ಕಥೆಯೇ ‘ನಾನು ಮತ್ತು ಗುಂಡ 2’
ಇದಕ್ಕೂ ಮೊದಲು ತಮ್ಮ ಜನನಿ ಪಿಕ್ಚರ್ಸ್ ಬ್ಯಾನರ್ ಅಡಿ ‘BTS’, ‘ನೋಡಿದವರು ಏನಂತರೆ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಭಾವ ತೀರ ಯಾನ’ ಸೇರಿದಂತೆ ಕೆಲವು ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಾಪಕ ರವಿಚಂದ್ರ ವಿತರಿಸಿದ್ದರು. ಈ ಸಾಲಿಗೆ ಈಗ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರ ಸಹ ಸೇರಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ಸಮರ್ಥ್ ಕಡಕೋಳ್, ‘ರಾಜೇಶ್ ಮತ್ತು ರವಿಚಂದ್ರ ಅವರ ಆಗಮನದಿಂದ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಇಬ್ಬರೂ ನಮ್ಮ ಚಿತ್ರದ ಬಿಡುಗಡೆಗೆ ಕೈ ಜೋಡಿಸಿರುವುದು ಖುಷಿಯಾಗಿದೆ’ ಎನ್ನುತ್ತಾರೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ದಿಗಂತ್ ಜೊತೆಗೆ ನಿಧಿ ಸುಬ್ಬಯ್ಯ, ಧನು ಹರ್ಷ, ನಿರೂಪ್ ಭಂಡಾರಿ, ‘ಭಜರಂಗಿ’ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





