ಯಶ್ ಅಭಿನಯದ ‘ಟಾಕ್ಸಿಕ್’ ತಂಡದಿಂದ ಅವರ ಹುಟ್ಟುಹಬ್ಬವಾದ ಇಂದು ಒಂದು ಆಶ್ಚರ್ಯ ಕಾದಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿತ್ತು. ಸ್ವತಃ ಯಶ್ ತಮ್ಮ ಖಾತೆಗಳ ಮೂಲಕ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಇದೆ ಎಂದು ಘೋಷಿಸಿದ್ದರು. ಆದರೆ, ಆ ಆಶ್ಚರ್ಯವೇನು ಎಂಬುದನ್ನು ಅವರು ಬಹಿರಂಗಗೊಳಿಸಿಲ್ಲ. ‘Unleashing him’ ಎಂದಷ್ಟೇ ಬರೆದುಕೊಂಡಿದ್ದರು.
ಅದಕ್ಕೆ ಸರಿಯಾಗಿ ಇಂದು ಚಿತ್ರದ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗುಡೆಯಾಗಿದೆ. ಯಶ್ ಈ ಟೀಸರ್‌ನಲ್ಲಿ ಕಾರ್‌ನಿಂದ ಬಂದು ಕ್ಲಬ್ ಎದುರು ಇಳಿಯುತ್ತಾರೆ. ಕ್ಲಬ್‍ನಲ್ಲಿ ಕಣ್ಣುಕುಕ್ಕುವ ಬೆಳಕಿನ ಮಧ್ಯೆ, ಲಲನೆಯರು ಕುಣಿಯುತ್ತಿರುತ್ತಾರೆ. ಅವರ ಮಧ್ಯೆ, ಯಶ್ ಸಿಗರೇಟ್ ಹೊತ್ತಿಸಿಕೊಂಡು ಒಳಗೆ ನಡೆಯುತ್ತಾ ಸಾಗುತ್ತಾರೆ. ಮೋಜಿನ ಅಮಲಿನಲ್ಲಿ ತೇಲುತ್ತಾ ಇರುವ ಜನರ ಮಧ್ಯೆ ನಡೆದು ಹೋಗುತ್ತಾರೆ. ಪಿಯಾನೋ ಎದುರು ಕುಳಿತ ಹುಡುಗಿಯೊಬ್ಬಳನ್ನು ತನ್ನೆಡೆಗೆ ಸೆಳೆಯುವುದರ ಜೊತೆಗೆ ಅವಳ ಮೇಲೆ ಬಾಟಲಿಯಲ್ಲಿದ್ದ ಮದ್ಯವನ್ನು ಸುರಿಯುವ ಮೂಲಕ ಈ ಟೀಸರ್ ಮುಗಿಯುತ್ತದೆ.
ಕಳೆದ ವರ್ಷದ ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಘೋಷಣೆಯಾಗಿತ್ತು. ಈ ವರ್ಷ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ದಿನಾಂಕ ಘೋಷಣೆಯಾಗಿಲ್ಲ. ಮೊದಲು ಚಿತ್ರವು 2025ರ ಏಪ್ರಿಲ್.10ರಂದು ಜಗತ್ತಿನಾದ್ಯಂತ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಚಿತ್ರೀಕರಣ ಮುಗಿಯದ ಕಾರಣ, ಮೊದಲು ಘೋಷಣೆಯಾದ ದಿನದಂದು ಚಿತ್ರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ, ಬೇರೆ ದಿನಾಂಕದಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಆದರೆ, ಯಾವ ದಿನ ಎಂದು ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್, ಅನಿಲ್ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಗೀತೂ ಮೋಹನ್ ದಾಸ್ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದರೆ, ಕೆ.ವಿ.ಎನ್. ಪ್ರೊಡಕ್ಷನ್ಸ್ ಮತ್ತು ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿ ವೆಂಕಟ್‍ನಾರಾಯಣ್ ಮತ್ತು ಯಶ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.