ನಟ ಸುದೀಪ್ ಅವರ ತಾಯಿ ಸರೋಜ ಸಂಜೀವ್, ಭಾನುವಾರ ಬೆಳಿಗ್ಗೆ ವಯೋಸಹಜ ಖಾಯಿಲೆಗಳಿಂದ ನಿಧನರಾಗಿದ್ದಾರೆ. ಅಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರವೂ ನಡೆದಿದೆ. ಸುದೀಪ್ ತಮ್ಮ ತಾಯಿಯನ್ನು ಭಾರವಾದ ಹೃದಯದಿಂದಲೇ ಬೀಳ್ಕೊಟ್ಟಿದ್ದಾರೆ. ಆ ನಂತರ ಸೋಮವಾರ ಸೋಷಿಯಲ್ ಮೀಡಿಯಾದಲ್ಲಿ ತಾಯಿಯನ್ನು ನೆನೆದು ಭಾವುಕರಾಗೊ ಸುಧೀರ್ಘವಾಗಿ ಪತ್ರವನ್ನು ಬರೆದಿದ್ದಾರೆ. ತಮ್ಮ ತಾಯಿ ಇನ್ನು ಸುಂದರವಾದ ನೆನಪು ಮಾತ್ರ ಎಂದು ಹೇಳಿಕೊಂಡಿದ್ದಾರೆ.
ನನ್ನ ತಾಯಿ ಪಕ್ಷಪಾತವಿಲ್ಲದ, ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಮೌಲ್ಯಗಳನ್ನು ಪಾಲಿಸಬೇಕೆನ್ನುವ ಗುಣಗಳನ್ನು ಹೇಳಿಕೊಟ್ಟ ಜೀವ. ಅವರು ಜೀವನದಲ್ಲಿ ನನ್ನ ಪಕ್ಕದಲ್ಲಿದ್ದ ಮಾನವ ರೂಪದ ದೇವರಾಗಿದ್ದರು. ನನ್ನ ಪಾಲಿಗೆ ನನ್ನ ತಾಯಿ ಹಬ್ಬ, ನನ್ನ ಗುರು, ನನ್ನ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ಅವರೀಗ ಸುಂದರ ನೆನಪು ಮಾತ್ರ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ನನ್ನ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಈಗ ಮಾತುಗಳಿಲ್ಲ. ಅವರಿಲ್ಲದ ಶೂನ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. 24 ಗಂಟೆಯಲ್ಲಿ ಎಲ್ಲವೂ ಬದಲಾಗಿ ಹೋಯಿತು. ಪ್ರತಿದಿನ ಬೆಳಗ್ಗೆ 5:30ಕ್ಕೆ ‘ಗುಡ್ ಮಾರ್ನಿಂಗ್ ಕಂದ ಎಂದು ನನ್ನ ತಾಯಿಯ ಕಡೆಯಿಂದ ಸಂದೇಶ ಬರುತ್ತಿತ್ತು. ಅವರು ಅಕ್ಟೋಬರ್ 18ರಂದು ನನಗೆ ಕೊನೆಯ ಬಾರಿ ಸಂದೇಶ ಕಳುಹಿಸಿದ್ದಾರೆ. ಮರುದಿನ ಬೆಳಗ್ಗೆ ‘ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗ, ಆ ದಿನ ಅಮ್ಮನ ಸಂದೇಶ ಬಂದಿರಲಿಲ್ಲ. ಹಲವು ವರ್ಷಗಳಲ್ಲಿ ಅವರ ಸಂದೇಶವನ್ನು ಮಿಸ್ ಮಾಡಿಕೊಂಡಿದ್ದು ಅದೇ ಮೊದಲು. ಅಂದು ಅಮ್ಮನಿಗೆ ಸಂದೇಶ ಕಳುಹಿಸಿದೆ. ಆ ಬಳಿಕ ಫೋನ್ ಮಾಡಿ ವಿಚಾರಿಸೋಣವೆಂದರೆ, ‘ಬಿಗ್ ಬಾಸ್ ಎಪಿಸೋಡ್ ಮಾಡುವ ಭರದಲ್ಲಿ ಅದು ಸಾಧ್ಯವಾಗಲಿಲ್ಲ. ಶನಿವಾರದ ಎಪಿಸೋಡ್ ಮಾಡಲು ಸ್ಟೇಜಿಗೆ ಹೋದಾಗ, ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಸಂದೇಶ ಬಂತು. ಕೂಡಲೇ ನನ್ನ ಅಕ್ಕನಿಗೆ ಕಾಲ್ ಮಾಡಿ ವೈದ್ಯರ ಬಳಿ ಮಾತನಾಡಿ ವೇದಿಕೆ ಹತ್ತಿದೆ. ನಂತರ ಕೆಲ ಸಮಯದ ಬಳಿಕ ನನ್ನ ಅಮ್ಮನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸಂದೇಶ ನನ್ನ ತಂಡದವರಿಗೆ ಬಂತು. ಇಂತಹ ಅಸಹಾಯಕತೆಯನ್ನು ಅನುಭವಿಸಿದ್ದು ಅದೇ ಮೊದಲು ಎಂದು ಬರೆದುಕೊಂಡಿದ್ದಾರೆ.
ಎಪಿಸೋಡ್ ಮಾಡುವಾಗ ನನ್ನ ತಲೆಯಲ್ಲಿ ಹಲವು ಯೋಚನೆಗಳು ಕಾಡುತ್ತಿದ್ದವು ಎಂದಿರುವ ಸುದೀಪ್, ‘ಆದರೂ ಶಾಂತಿಯಿಂದ ಎಪಿಸೋಡ್ ಮುಗಿಸಿದೆ. ಏನೇ ಆಗಲಿ ಅರ್ಧದಲ್ಲಿ ಕೆಲಸ ಬಿಡಬೇಡ ಎನ್ನುವ ನನ್ನ ಅಮ್ಮ ಹೇಳಿ ಕೊಟ್ಟ ಪಾಠವೇ ಅದು. ಶನಿವಾರ ಶನಿವಾರದ ಎಪಿಸೋಡ್ ಮುಗಿಸಿದ ಕೂಡಲೇ ಆಸ್ಪತ್ರೆಗೆ ಹೋದೆ. ನಾನು ತಲುಪುವ ಮೊದಲೇ ತಾಯಿಯನ್ನು ವೆಂಟಿಲೇಟರ್ ನಲ್ಲಿ ಇರಿಸಿದ್ದರು. ನನ್ನ ತಾಯಿ ಪ್ರಜ್ಞೆಯಲ್ಲಿರುವಾಗ ನನಗೆ ಕೊನೆಗೆ ನೋಡಲು ಸಾಧ್ಯವಾಗಲಿಲ್ಲ. ಭಾನುವಾರ ಕೊನೆಯ ಉಸಿರು ಎಳೆಯುವ ಮುನ್ನ ಅಮ್ಮ ಸಾಕಷ್ಟು ಹೋರಾಡಿದರು. ಕೆಲವೇ ಗಂಟೆಗಳಲ್ಲಿ ಹಲವು ಬದಲಾವಣೆಗಳಾದವು. ಈ ವಾಸ್ತವವನ್ನು ನಾನು ಹೇಗೆ ಒಪ್ಪಿಕೊಳ್ಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಶೂಟಿಂಗ್‍ಗೆ ಹೋಗುವ ಮುನ್ನ ನನ್ನ ತಾಯಿ ಬಿಗಿಯಾಗಿ ನನ್ನನ್ನು ಅಪ್ಪಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅವರು ಇಲ್ಲ. ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಕಳೆದು ಹೋಗಿದೆ. ಆಕೆ ಶಾಂತಿ ತುಂಬಿದ ಸ್ಥಳವನ್ನು ತಲುಪಿದ್ದಾಳೆ ಎಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.





