ಕನ್ನಡ ಚಿತ್ರರಂಗ ಈ ವರ್ಷ ಸತತ ಸೋಲುಗಳನ್ನು ನೋಡುತ್ತಿದೆ. ಕಳೆದ ಏಳು ತಿಂಗಳುಗಳಲ್ಲಿ 130ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರ ಸಹ ದೊಡ್ಡ ಯಶಸ್ಸು ಕಂಡಿಲ್ಲ. ಬರೀ ಅಷ್ಟೇ ಅಲ್ಲ, ಜನ ಚಿತ್ರಮಂದಿರಗಳಿಗೆ ಚಿತ್ರ ನೋಡುವುದಕ್ಕೆ ಬರುತ್ತಿಲ್ಲ. ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ತಮಿಳಿನಲ್ಲೂ ಇದೇ ಸಮಸ್ಯೆ ಇದ್ದು, ಸಮಸ್ಯೆ ಮತ್ತು ಈಗಿರುವ ಚಿತ್ರಗಳು ಬಿಡುಗಡೆಯಾಗುವವರೆಗೂ ಹೊಸ ಚಿತ್ರಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ನಟ ಜಗ್ಗೇಶ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾತನಾಡಿರುವ ಅವರು, ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
‘ಯಾರೂ ಕೆಟ್ಟ ಚಿತ್ರಗಳನ್ನು ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಎಲ್ಲರೂ ಒಳ್ಳೆಯ ಚಿತ್ರಗಳನ್ನು ಮಾಡಬೇಕು ಎಂದೇ ಬರುತ್ತಾರೆ. ಚಿತ್ರ ಮಾಡುವುದರ ಜೊತೆಗೆ ಚೆನ್ನಾಗಿ ಪ್ರಚಾರ ಸಹ ಮಾಡುತ್ತಿದ್ದಾರೆ. ಟಿವಿ, ಪೇಪರ್‍ಗಳಲ್ಲಿ ಜಾಹೀರಾತುಗಳನ್ನು ಕೊಡುತ್ತಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾದಾಗ ಪ್ರೇಕ್ಷಕರು ಬರುತ್ತಿಲ್ಲ. ಪ್ರೇಕ್ಷಕರು ಚಿತ್ರ ನೋಡದಿದ್ದರೆ, ಯಾರಿಗಾಗಿ ಚಿತ್ರ ಮಾಡಬೇಕು. ಕನ್ನಡ ಚಿತ್ರರಂಗ ಇಂಥದ್ದೊಂದು ಪರಿಸ್ಥಿತಿಯನ್ನು ಯಾವತ್ತೂ ನೋಡಿರಲಿಲ್ಲ’ ಎಂದಿದ್ದಾರೆ.
‘ಈ ಸಮಸ್ಯೆ ಬರೀ ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಇದೆ. ಕ್ರಮೇಣ ಸಿನಿಮಾ ಸಾಯುತ್ತಿದೆಯಾ ಎಂಬ ಭಾವನೆ ಮೂಡುತ್ತಿದೆ. ದೊಡ್ಡ ಚಿತ್ರಗಳನ್ನು ಮಾತ್ರ ಜನ ಗುರುತಿಸುತ್ತಿದ್ದಾರೆ. 200 ಕೋಟಿ ರೂ ಬಜೆಟ್ ಹಾಕಿ ಮಾಡುವ ಚಿತ್ರಗಳಿಗೆ ಮಾತ್ರ ಜನ ಹೋಗುತ್ತಿದ್ದಾರೆ. ಹೀಗಾದರೆ, ಸಣ್ಣ ಚಿತ್ರಗಳ ಕಥೆಯೇನು’ ಎಂದು ಪ್ರಶ್ನಿಸುತ್ತಾರೆ ಜಗ್ಗೇಶ್. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಕೆಟ್ಟ ವಿಮರ್ಶೆಗಳ ಬಗ್ಗೆ ಅವರು ಕಿಡಿಕಾರಿದ್ದಾರೆ.
ಸದ್ಯ ಜಗ್ಗೇಶ್ ಯಾವೊಂದು ಚಿತ್ರದಲ್ಲೂ ನಟಿಸುತ್ತಿಲ್ಲ. ಅವರು ಕೊನೆಯದಾಗಿ ನಟಿಸಿದ ‘ರಂಗನಾಯಕ’ ಚಿತ್ರವು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ, ಅತ್ಯಂತ ಧಾರುಣವಾಗಿ ಸೋತಿತ್ತು. ಗುರುಪ್ರಸಾದ್ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ಫ್ಲಾಪ್ ಎಂದು ಘೋಷಿಸಲ್ಪಟ್ಟಿತು.