Mysore
19
overcast clouds
Light
Dark

ಕಟ್ಟ ಕಾಮೆಂಟ್ ಮಾಡೋರಿಗೆ ಹಾಡಿನ ಮೂಲಕ ಟಾಂಗ್ ಕೊಟ್ಟ ಇಶಾನಿ

‘ಬಿಗ್ ಬಾಸ್’ ನಂತರ ಹಿಪ್‍ಹಾಪ್‍ ಗಾಯಕಿ ಇಶಾನಿ ಸುದ್ದಿಯೇ ಇರಲಿಲ್ಲ. ಅವರೇನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸೋಷಿಯಲ್‍ ಮೀಡಿಯಾದಲ್ಲಿ ತಮ್ಮ ಬಗ್ಗೆ ಕೆಟ್ಟ ಕಾಮೆಂಟ್‍ಗಳನ್ನು ಮಾಡುತ್ತಿದ್ದವರಿಗೂ ಅವರು ಈ ಹಾಡಿನ ಮೂಲಕ ಉತ್ತರ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಇಶಾನಿ ಸಾಕಷ್ಟು ಟ್ರೋಲ್‍ ಆಗಿದ್ದಾರೆ. ‘ಯುವತಿಯರು ಮಾಡ್ರನ್ ಡ್ರೆಸ್ ಹಾಕೋದು, ಬೋಲ್ಡ್ ಆಗಿರುವುದು ತಪ್ಪೇ, ನನ್ನ ಇಷ್ಟದಂತೆ ನಾನಿರೋದನ್ನು ಯಾಕೆ ಸಹಿಸಲ್ಲ’ ಎಂದು ಈ ಹಿಂದೆ ಅವರು ಪ್ರಶ್ನಿಸಿದ್ದರು. ಅಂಥವರಿಗೆ ‘ಅಸಲಿ ಬಣ್ಣ’ ಎಂಬ ಹಿಪಪ್ ಸಾಂಗ್ ಮೂಲಕ ಇಶಾನಿ ತಿರುಗೇಟು ಕೊಟ್ಟಿದ್ದಾರೆ.

ಈಶಾನಿ, ಶುಕ್ರವಾರದಂದು ತಮ್ಮ ಹುಟ್ಟುಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ‘ಅಸಲಿ ಬಣ್ಣ’ ಹಿಪ್ ಹಾಪ್ ಹಾಡು ಬಿಡುಗಡೆ ಆಗಿದೆ. ಈ ಗೀತೆಯನ್ನು ಈಶಾನಿ ಹಾಡುವ ಜೊತೆಗೆ ಅದರಲ್ಲಿ ಅವರೇ ಅಭಿನಯಿಸಿದ್ದಾರೆ. ಅವರ ಒಂದಷ್ಟು ಸ್ನೇಹಿತರೇ ಸೇರಿ ಈ ಹಾಡನ್ನು ಮಾಡಿದ್ದಾರೆ.

ವೆಂಕಟ್ ಅವರು ಈ ಹಾಡನ್ನು ನಿರ್ಮಿಸಿದ್ದು, ಗಿರಿಗೌಡ ನಿರ್ದೇಶನ, ಮಾರ್ಟಿನ್ ಸಾಹಿತ್ಯ, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ, ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆ ಈ ಹಾಡಿಗಿದೆ.

ಈ ಬಗ್ಗೆ ಮಾತನಾಡಿದ ಇಶಾನಿ ‘ಈ ಹಾಡಿನ ಮೂಲಕ ಮಹಿಳೆಯರಿಗೆ ಕೆಟ್ಟದಾಗಿ ಟ್ರೋಲ್‍ ಮಾಡುವವರಿಗೆ ಟಾಂಗ್ ಕೊಟ್ಟಿದ್ದೇನೆ. ಅಂಥವರಿಗೆ ನಮ್ಮ ಭಾವನೆಗಳು ಅರ್ಥ ಆಗಬೇಕು. ನನ್ನ ಬಗ್ಗೆ ಯಾರೆಲ್ಲ ಕೆಟ್ಟ ಪದಗಳನ್ನು ಬಳಸಿದ್ದರೋ, ಅದೇ ಪದಗಳನ್ನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ‘ಬಿಗ್ ಬಾಸ್’ ನಡೆಯುತ್ತಿರುವಾಗಲೇ ಈ ಹಾಡನ್ನು ಬರೆದಿದ್ದೆ. ನನಗನಿಸಿದ್ದನ್ನು ಹೇಳಿಕೊಳ್ಳಲು ಇದು ಒಳ್ಳೆಯ ದಾರಿ ಎಂದನಿಸಿತು. ಮಾರ್ಟಿನ್ ಇದಕ್ಕೆ ಪೈನಲ್ ಟಚ್ ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವುದಾಗಿದೆ’ ಎಂದರು.

ನಿರ್ದೇಶಕ ಗಿರಿ ಗೌಡ ಮಾತನಾಡಿ, ‘ಈಶಾನಿ ಅವರನ್ನು ಇಷ್ಟಪಡುವವರಾಗಿ ನಾವು ಅವರಿಗೆ ಸಹಕಾರ ನೀಡುವ ದೃಷ್ಟಿಯಿಂದ ಈ ಗೀತೆ ಮಾಡಿದ್ದೇವೆ. ಇನ್ನು ಒಂದಿಷ್ಟು ಗೀತೆಗಳನ್ನು ಅವರ ಜೊತೆ ಮಾಡುತ್ತೇನೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ’ ಎಂದರು.

ಈ ಹಾಡನ್ನು ವಿಭಿನ್ನ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಾದ ಸುರೇಶ್, ಮಂಜೇಶ್ ಹಾಗೂ ಮನೀಶ್ ಬಿಡುಗಡೆ ಮಾಡಿದರು. ‘ಬಿಗ್ ಬಾಸ್ ‘ ಗೆಳೆಯರಾದ ತನಿಷಾ ಕುಪ್ಪುಂಡ, ಸಿರಿ, ಐಶ್ವರ್ಯ ರಂಗರಾಜನ್‍, ಅವಿನಾಶ್‍, ಪವಿ ಪೂವಯ್ಯ, ರಕ್ಷಕ್‍ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದರು.

Tags: