ಪಹಲ್ಗಾಮ್ ದಾಳಿಯಾದಾಗ ಅದನ್ನು ಖಂಡಿಸಿ ಟ್ವೀಟ್ ಮಾಡಿದ್ದ ಸುದೀಪ್, ಇದೀಗ ಆಪರೇಷನ್ ಸಿಂಧೂರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಗುಣಗಾನ ಮಾಡಿ ಸುದೀರ್ಘ ಪತ್ರವನ್ನು ಸುದೀಪ್ ಬರೆದಿದ್ದಾರೆ.
ಶನಿವಾರ ತಮ್ಮ ಕಿಚ್ಚ ಕ್ರಿಯೇಷನ್ಸ್ನ ‘ಎಕ್ಸ್’ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಸುದೀಪ್, ಕನ್ನಡ ಚಿತ್ರರಂಗವು ನಿಮ್ಮ ನಿಲುವಿನೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ತಮ್ಮ ತಾಯಿ ಸರೋಜಾ ಸಂಜೀವ್ ಅವರ ನಿಧನದ ಬಗ್ಗೆ ನರೇಂದ್ರ ಮೋದಿ ಅವರು ಬರೆದ ಹೃದಯಸ್ಪರ್ಶಿ ಸಂತಾಪ ಪತ್ರಕ್ಕೆ ಧನ್ಯವಾದ ಹೇಳಿರುವ ಸುದೀಪ್, ‘ವೈಯಕ್ತಿಕ ನಷ್ಟದ ಆ ಕ್ಷಣದಲ್ಲಿ, ನಿಮ್ಮ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಸಾಗಿಸುವ ಶಕ್ತಿ ಮತ್ತು ಸಹಾನುಭೂತಿಯನ್ನು ನೀಡಿತು’ ಎಂದು ಹೇಳಿದ್ದಾರೆ.
ನಾನು ಕೇವಲ ಮಗನಾಗಿ ಮಾತ್ರವಲ್ಲ, ಒಬ್ಬ ಹೆಮ್ಮೆಯ ಭಾರತೀಯನಾಗಿ ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದಿರುವ ಅವರು, ‘ಆಪರೇಷನ್ ಸಿಂಧೂರ, ಜಗತ್ತಿಗೆ ಒಂದು ಮಹತ್ವದ ಸಂದೇಶವಾಗಿದೆ. ಭಾರತದ ಸ್ಥಿರತೆಯ ದ್ಯೋತಕವಾಗಿದೆ. ಈ ಮೂಲಕ ಭಾರತ ಎಂದೂ ಹಿಂದೆ ಸರಿಯದು, ಏನನ್ನೂ ಮರೆಯದು, ಯಾವಾಗಲೂ ಎಚ್ಚೆತ್ತ ಸ್ಥಿತಿಯಲ್ಲಿರುತ್ತದೆ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ನೀಡಲಾಗಿದೆ’ ಎಂದಿದ್ದಾರೆ.
‘ನಿಮ್ಮ ನಿರ್ಣಯಗಳಿಗೆ ಪ್ರತಿಯೊಬ್ಬ ಕನ್ನಡಿಗನ, ಇಡೀ ಕನ್ನಡ ಚಿತ್ರರಂಗದ ಬೆಂಬಲವಿದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ ನಮ್ಮ ರಕ್ಷಣಾ ಪಡೆಗಳು ಯಾವುದೇ ಸಾಟಿ ಇಲ್ಲದ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿದೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲಾ ಒಂದು ರಾಷ್ಟ್ರ, ಒಂದೇ ಧ್ವನಿಯಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಪ್ರತಿಯೊಬ್ಬ ಕನ್ನಡಿಗನೂ, ಸಂಪೂರ್ಣ ಕನ್ನಡ ಚಿತ್ರರಂಗವೂ ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುತ್ತೇವೆ. ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ್’ ಎಂದು ಬರೆದಿದ್ದಾರೆ.
ಸುದೀಪ್ ಅವರ ಈ ನಡೆಗೆ, ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.





