ಅಜೇಯ್ ರಾವ್ ಅಭಿನಯದ ‘ಯುದ್ಧ ಕಾಂಡ’ ಚಿತ್ರದ ಸುದ್ದಿಯೇ ಇರಲಿಲ್ಲ. ಎರಡು ವರ್ಷಗಳ ಹಿಂದೆಯೇ ಘೋಷಣೆಯಾದರೂ, ಚಿತ್ರ ಯಾವ ಹಂತದಲ್ಲಿದೆ ಎಂಬ ಸೂಕ್ತವಾದ ಮಾಹಿತಿ ಇರಲಿಲ್ಲ. ಈಗ ಚಿತ್ರವನ್ನು ಸದ್ದಿಲ್ಲದೆ ಮುಗಿಸಿಕೊಂಡು ಬಂದಿದ್ದಾರೆ ಅಜೇಯ್ ರಾವ್. ಅಷ್ಟೇ ಅಲ್ಲ, ಚಿತ್ರವನ್ನು ಏ.18ಕ್ಕೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರದ ಒಂದು ಹಾಡು ಬಿಡುಗಡೆ ಮತ್ತು ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯ ಪತ್ರಿಕಾಗೋಷ್ಠಿಯಲ್ಲಿ ಅಜೇಯ್ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಈ ಚಿತ್ರ ಮಾಡುವುದಕ್ಕೆ ತಮಗೆ ಎರಡು ಸ್ವಾರ್ಥಗಳಿವೆ ಎಂದು ಹೇಳಿದ್ದಾರೆ. ಅದೇ ಕಾರಣಕ್ಕೆ ಅವರು ಚಿತ್ರವನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರವು ದೇಶದಾದ್ಯಂತ ಸದ್ದು ಮಾಡಬೇಕೆಂಬುದು ಮೊದಲ ಸ್ವಾರ್ಥವಾದರೆ, ತಾನು ಕನ್ನಡದ ಮುಂಚೂಣಿಯ ನಾಯಕರ ಪೈಕಿ ಬಂದು ನಿಲ್ಲಬೇಕೆಂಬುದು ಎರಡನೆಯ ಸ್ವಾರ್ಥ ಎಂದು ಹೇಳಿದ್ದಾರೆ.
ತನಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ, ಕೊರಗು ಇದೆ ಎನ್ನುವ ಅಜೇಯ್ ರಾವ್, ‘ಕನ್ನಡದಲ್ಲಿ ಯಾರೂ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ. ಯಾರೂ ಬಳಸಿಕೊಳ್ಳದಿದ್ದಾಗ, ನಾವೇ ಆ ಪ್ರಯತ್ನ ಮಾಡಬೇಕು ಎಂದು ನಂಬಿರುವವನು ನಾನು. ನನ್ನನ್ನು ನಾನೇ ಸೃಷ್ಟಿ ಮಾಡಿಕೊಳ್ಳಬೇಕು, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿ, ಈ ಚಿತ್ರಕ್ಕೆ ನಿರ್ಮಾಣಕ್ಕೆ ಕೈ ಹಾಕಿದೆ. ನಾನು ಬೆಳೆಯಬೇಕು ಎಂಬ ಸ್ವಾರ್ಥದಿಂದ ಈ ಚಿತ್ರ ಮಾಡಿದೆ’ ಎನ್ನುತ್ತಾರೆ ಅಜೇಯ್.
ತನಗೆ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎಂಬ ಆಸೆ ಎನ್ನುವ ಅಜೇಯ್, ‘ರೀ ನಟನೆ ಮಾಡಿಕೊಂಡಿರುತ್ತೇನೆ, ಬಂದ ದುಡ್ಡಲ್ಲಿ ಮನೆ ನೋಡಿಕೊಂಡಿದ್ದರೆ ಸಾಕು ಎಂದರೆ ಆರಾಮಾಗಿ ಇರಬಹುದು. ನನಗೆ ನಿರ್ಮಾಣ ಅಥವಾ ಹೋರಾಟ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡಬೇಕು ಎಂಬ ಆಸೆ ನನಗಿದೆ. ಈಗಾಗಲೇ ಯಶ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಮುಂತಾದವರು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರೆಲ್ಲರಿಂದ ನಾನು ಬಹಳ ಸ್ಫೂರ್ತಿ ಪಡೆದಿದ್ದೇನೆ. ಅವರೆಲ್ಲರೂ ನಾನು ಬಂದ ನಂತರ ಬಂದವರು. ಈ ಕಾರಣಕ್ಕೆ ನಾನು ಮುಂಚೂಣಿಗೆ ಬರಬೇಕು ಎಂಬ ಆಸೆ ಇದೆಯೇ ಹೊರತು, ಕೋಟಿ ಕೋಟಿ ಸಂಭಾವನೆ ಪಡೆದು ಮೆರೆಯಬೇಕು ಎಂಬ ಆಸೆ ಇಲ್ಲ’ ಎನ್ನುತ್ತಾರೆ ಅಜೇಯ್.





