Mysore
27
broken clouds

Social Media

ಶನಿವಾರ, 16 ಮೇ 2026
Light
Dark

ಶಂಕರನ‌ ಮಗ ಹಾಗೂ ಸಿಂಬನ ಕಥೆಯೇ ‘ನಾನು ಮತ್ತು ಗುಂಡ 2’

‘ನಾನು ಮತ್ತು ಗುಂಡ’ ಎಂಬ ಚಿತ್ರ ಐದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು ನೆನಪಿರಬಹುದು. ರಘು ಹಾಸನ್‍ ನಿರ್ಮಾಣದ ಈ ಚಿತ್ರವನ್ನು ಶ್ರೀನಿವಾಸ್‍ ತಿಮ್ಮಯ್ಯ ನಿರ್ದೇಶನ ಮಾಡಿದ್ದು ಶಿವರಾಜ್‍ ಕೆ.ಆರ್‍.ಪೇಟೆ ಮತ್ತು ಸಿಂಬ ಎಂಬ ಶ್ವಾನವು ‘ನಾನು ಮತ್ತು ಗುಂಡ’ನಾಗಿ ಅಭಿನಯಿಸಿದ್ದರು.

ಈಗ ಆ ಚಿತ್ರದ ಮುಂದುವರೆದ ಭಾಗ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರನ್ನು ‘ಕೆ.ಜಿ.ಎಫ್’ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಆಡಿಗ ನಾಯಕನಾಗಿದ್ದು, ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ-ನಿರ್ದೇಶಕ ರಘು ಹಾಸನ್, ‘ರಾಕೇಶ್ ಅಡಿಗ ಈ ಚಿತ್ರದಲ್ಲಿ ಶಿವರಾಜ್ ಅವರ ಮಗನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಮೊದಲ ಭಾಗ ಮಾಡುವಾಗಲೇ ಮುಂದುವರೆದ ಭಾಗದ ಕಥೆ ರೆಡಿ ಮಾಡಿಕೊಂಡಿದ್ದೆ. ಸಾಮಾಜಿಕ ಕಳಕಳಿ ಜೊತೆಗೆ ದೈವಿಕ ಅಂಗಳಿರುವ ಈ ಚಿತ್ರಕ್ಕೆ ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು.

ಮೇ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆ ಇದೆ ಎಂದ ರಘು, ‘ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಮೊದಲ ಚಿತ್ರದಲ್ಲಿ ನಟಸಿದ್ದ ಸಿಂಬ (ಶ್ವಾನ) ನಾಲ್ಕು ದಿನಗಳ ಕಾಲ ನಟಿಸಿದ ನಂತರ ನಿಧನ ಹೊಂದಿತಂತೆ. ಆ ನಂತರ ಅದರ ಮಗ ಈ ಚಿತ್ರದಲ್ಲಿ ನಟಿಸಿದೆ. ಶಂಕರನ‌ ಮಗ ಹಾಗೂ ಶ್ವಾನದ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಅಲ್ಲದೆ ಸಿಂಬ ಜೊತೆ ಬಂಟಿ ಎಂಬ ಇನ್ನೊಂದು ಶ್ವಾನವೂ ಅಭಿನಯಿಸಿದೆ.

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜಿಸಿದ್ದು, ಕೆ.ಎಂ.ಪ್ರಕಾಶ್‍ ಅವರ ಸಂಕಲನವಿದೆ. ಚಿತ್ರದಲ್ಲಿ ರಾಕೇಶ್‍ ಅಡಿಗ ಮತ್ತು ರಚನಾ ಇಂದರ್ ಜೊತೆಗೆ ಯುವನ್‍ ಸಾಯಿ, ಗೋವಿಂದೇಗೌಡ, ಸಾಧು ಕೋಕಿಲ, ಅವಿನಾಶ್‍ ಮುಂತಾದವರು ನಟಿಸಿದ್ದಾರೆ.

Tags:
error: Content is protected !!