Mysore
25
broken clouds
Light
Dark

‘ಬಿಗ್‍ ಬಾಸ್ ಸೀಸನ್‍ 11’: ಅಡ್ಡಗೋಡೆ ಮೇಲೆ ದೀಪ ಇಟ್ಟ ಸುದೀಪ್‍

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 10 ವರ್ಷಗಳ ಕಾಲ ಪ್ರಸಾರವಾದ ‘ಬಿಗ್‍ ಬಾಸ್‍’ ಕಾರ್ಯಕ್ರಮ ಜನಪ್ರಿಯವಾಗುವಲ್ಲಿ ಸುದೀಪ್‍ ಅವರ ಪಾತ್ರ ಬಹಳ ದೊಡ್ಡದು. ಬೇರೆ ಯಾವ ಭಾಷೆಯಲ್ಲೂ ಯಾವೊಬ್ಬ ನಿರೂಪಕರೂ ಅಷ್ಟೊಂದು ವರ್ಷಗಳ ಕಾಲ ಸತತವಾಗಿ ಕಾರ್ಯಕ್ರಮ ನಡೆಸಿಕೊಟ್ಟಿರಲಿಲ್ಲ. ಹೀಗಿರುವಾಗ ಸುದೀಪ್‍ ಸತತ 10 ವರ್ಷಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟಿದ್ದರೆ. ಆದರೆ, ಈ ಬಾರಿ ಅವರು ಕಾರ್ಯಕ್ರಮ ನಿರೂಪಿಸುವುದು ಸಂಶಯ, ಅವರ ಬದಲು ರಮೇಶ್‍ ಅರವಿಂದ್ ಅಥವಾ ರಿಷಭ್‍ ಶೆಟ್ಟಿ ಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಈ ವಿಷಯದ ಬಗ್ಗೆ ಸುದೀಪ್‍ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ವಿಷಯವಾಗಿ ಸುದೀಪ್‍ ಏನು ಹೇಳುತ್ತಾರೆ ಎಂಬ ಕುತೂಹಲದಲ್ಲಿ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಕೇಳಿದಾಗ, ಸುದೀಪ್‍ ಸರಿಯಾಗಿ ಉತ್ತರಿಸಲಿಲ್ಲ. ತಾವು ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ ಎಂದೂ ಹೇಳಲಿಲ್ಲ. ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಬಗ್ಗೆ ಸ್ಪಷ್ಟನೆ ಸಹ ನೀಡಲಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟರು.

ಈ ಕುರಿತು ಮಾತನಾಡಿರುವ ಅವರು, ‘‘ಬಿಗ್‍ ಬಾಸ್‍’ ಮಾತುಕತೆ ನಡೆಯುತ್ತಿದೆ. ನನ್ನ ಜೀವನದ ಹಲವು ದಿನಗಳನ್ನು ನಾನು ಆ ಕಾರ್ಯಕ್ರಮಕ್ಕಾಗಿ ತ್ಯಾಗ ಮಾಡಿದ್ದೇನೆ. ಎಲ್ಲರಿಗೂ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ ಎಂದಷ್ಟೇ ಗೊತ್ತಿದೆ. ಆದರೆ, ಹೇಗೆ ನಡೆಸಿಕೊಡುತ್ತೇನೆ ಎಂದು ಯಾರಿಗೂ ಗೊತ್ತಿಲ್ಲ. ಅಷ್ಟು ಹೊತ್ತು ಹಾಗೆ ನಿಂತಿರುವುದು ಎಷ್ಟು ಕಷ್ಟ ಗೊತ್ತಾ? ಕಳೆದ ವರ್ಷ ‘ಮ್ಯಾಕ್ಸ್’ ಚಿತ್ರೀಕರಣ ಮಾಡುವಾಗ ಬೆಳಿಗ್ಗೆ ಮೂರೂವರೆಗೆ ಚಿತ್ರೀಕರಣ ಮುಗಿಸಿ, ಇಲ್ಲಿಗೆ ಬರುತ್ತಿದ್ದೆ. ನನ್ನಿಂದ ತಡವಾಗಬಾರದು ಎಂದು ಚಾರ್ಟರ್ಡ್ ವಿಮಾನವನ್ನು ಬಾಡಿಗೆಗೆ ತಗೆದುಕೊಂಡಿದ್ದೆ. ಮಹಾಬಲಿಪುರಂನಿಂದ ಚೈನ್ನೈಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬರುತ್ತಿದ್ದೆ. ಚಿತ್ರೀಕರಣ ಮುಗಿಸಿ ರಾತ್ರೋರಾತ್ರಿ ಚೆನ್ನೈಗೆ ಹೋಗಿ, ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಆ ಕಾರ್ಯಕ್ರಮಕ್ಕೆ ನಾನು ಸಾಕಷ್ಟು ಸಮಯ ಕೊಟ್ಟಿದ್ದೇನೆ. ನಾನು ನನ್ನ ಸಿನಿಮಾಗಳ ಬಗ್ಗೆ ಹೆಚ್ಚು ಗಮನಕೊಡಬೇಕಾ? ಆ ಕಾರ್ಯಕ್ರಮದ ಬಗ್ಗೆ ಗಮನ ಕೊಡಬೇಕಾ? ಅಥವಾ ನನ್ನ ಬಗ್ಗೆ ಕೊಡಬೇಕಾ? ಎಂದು ಯೋಚಿಸಬೇಕಿದೆ’ ಎಂದರು.

‘ಬಿಗ್‍ ಬಾಸ್‍’ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ನನಗೆ ಮಾಡುವುದಕ್ಕೆ ಆಸಕ್ತಿ ಇಲ್ಲ ಅಥವಾ ಅವರಿಗೆ ನಾನು ಬೇಡ ಎಂದು ಮಾತಾಗಿಲ್ಲ ಎಂದ ಸುದೀಪ್‍, ‘ಇಷ್ಟು ವರ್ಷ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದೇನೆ, ಕಾರ್ಯಕ್ರಮಕ್ಕಾಗಿ ಸಾಕಷ್ಟು ಟೈಂ ಕೊಟ್ಟಿದ್ದೇನೆ. ಕೆಲವೊಮ್ಮೆ ನಾವು ಜೀವನದಲ್ಲಿ ಮುಂದುವರೆಯಬೇಕು. ಅವರು ಯಾರನ್ನಾದರೂ ಹುಡುಕಿಕೊಂಡರೆ ಒಳ್ಳೆಯದು. ಬೇರೆಯವರು ‘ಬಿಗ್ ಬಾಸ್‍’ ನಡೆಸಿಕೊಡುವುದನ್ನು ನೋಡೋಕೆ ನಾನು ಸಹ ಕಾಯುತ್ತಿದ್ದೇನೆ’ ಎಂದು ಹೇಳಿದರು.

Tags: