ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಹಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅದೀಗ ನಿಜವಾಗಿದೆ. ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ ತಂಡದ ಜೊತೆಗೂಡಿ 45 ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಪೆರ್ರಿ ಸಜ್ಜಾಗಿದ್ದಾರೆ.
ಪೆರ್ರಿ ಇದಕ್ಕೂ ಮೊದಲು ಹಾಲಿವುಡ್‍ನ ಜನಪ್ರಿಯ ಚಿತ್ರಗಳಾದ ‘ಜಾನ್ ವಿಕ್’, ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಡೇ ಶಿಫ್ಟ್’ ಮುಂತಾದ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದಾರೆ. ಈಗ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್‍ಗೆ ಸೆಡ್ಡು ಹೊಡೆಯುವಂತಹ ಸಾಹಸ ದೃಶ್ಯಗಳು ಇರಲಿವೆ ಎಂದು ಹೇಳಲಾಗುತ್ತಿದೆ.
ಕಳೆದ 35 ವರ್ಷಗಳಲ್ಲಿ ಸುಮಾರು 39 ದೇಶಗಳಲ್ಲಿ ಕೆಲಸ ಮಾಡಿರುವ ಪೆರ್ರಿ, ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಿರಲಿಲ್ಲ. ‘ಟಾಕ್ಸಿಕ್’ ಚಿತ್ರತಂಡದ ಜೊತೆಗೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಪೆರ್ರಿ ಹೇಳಿಕೊಂಡಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್ ನಟ ಕೈಲ್ ಪಾಲ್, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್, ಅನಿಲ್ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
‘ಟಾಕ್ಸಿಕ್’ ಒಂದು ಪ್ಯಾನ್ ವರ್ಲ್ಡ್ ಚಿತ್ರವಾಗಿದ್ದು, 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.




