Mysore
20
overcast clouds
Light
Dark

ಅವರ ಕನಸಲ್ಲಿ ಇವರ ಪಾತ್ರ; ‘ರೂಪಾಂತರ’ ಟ್ರೇಲರ್ ಬಿಡುಗಡೆ

ರಾಜ್‍ ಬಿ ಶೆಟ್ಟಿ ಅಭಿನಯದ ‘ಏಕಂ’ ಎಂಬ ವೆಬ್‍ಸರಣಿ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಈಗ ಇದೇ ಶುಕ್ರವಾರ (ಜುಲೈ 26), ರಾಜ್‍ ಅಭಿನಯದ ‘ರೂಪಾಂತರ’ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರು ಬರೀ ನಟ ಮತ್ತು ಸಂಭಾಷಣೆಕಾರ. ಮಿಕ್ಕ ಜವಾಬ್ದಾರಿಗಳು ಅವರ ಸ್ನೇಹಿತರದ್ದು. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

‘ರೂಪಾಂತರ’ ಬಗ್ಗೆ ಮಾತನಾಡುವ ರಾಜ್ ಬಿ ಶೆಟ್ಟಿ, ‘ನನಗೆ ಬಹಳ ಇಷ್ಟವಾದ ಚಿತ್ರಗಳ ಪೈಕಿ ‘ರೂಪಾಂತರ’ ಸಹ ಒಂದು. ಈ ಚಿತ್ರದಲ್ಲಿ ನಾನು ನಟ ಮತ್ತು ಸಣ್ಣಮಟ್ಟದಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ಬಿಟ್ಟರೆ, ಇದು ಇವರ ಕನಸು. ಇದರಲ್ಲಿ ಬೇರೆಬೇರೆ ಪಾತ್ರಗಳ, ಬೇರೆಬೇರೆ ಕಥೆಗಳಿವೆ. ಅವು ರೂಪಾಂತರಗೊಳ್ಳುವುದೇ ಈ ಚಿತ್ರದ ಕಥೆ. ಜೀವನದ ಒಂದು ಮಗ್ಗುಲಲ್ಲಿ ಅವರಲ್ಲಿ ರೂಪಾಂತರವಾಗುವ ಕಥೆ ಇದೆ. ಎಲ್ಲಾ ಕಥೆಗಳು ಸಮಾನಾಂತರವಾಗಿ ಸಾಗುತ್ತಿರುತ್ತದೆ. ಒಂದು ಹಂತದಲ್ಲಿ ಅವರೆಲ್ಲಾ ಭೇಟಿಯಾಗುತ್ತಾರೆ. ಒಬ್ಬನ ರೂಪಾಂತರಕ್ಕೆ ಇನ್ನೊಬ್ಬರ ಕೊಡುಗೆ ಇರುತ್ತದೆ’ ಎಂದರು.

ಈ ಚಿತ್ರವನ್ನು ಮಿಥಿಲೇಶ್ ಎಡವಲತ್ ನಿರ್ದೇಶಿಸಿದ್ದಾರೆ. ಅವರು ಮೂಲತಃ ಕೇರಳದವರು. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವುದರ ಜೊತೆಗೆ ಕಥೆ ಬರೆದು ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ನಾನು ನೋಡಿ, ಸ್ಫೂರ್ತಿಗೊಂಡ ಜನರ ಕಥೆ ಇದು. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸುತ್ತತ್ತದೆ’ ಎಂದು ಹೇಳಿಕೊಂಡರು ಮಿಥಿಲೇಶ್.

ನಿರ್ಮಾಪಕ ಸುಹಾನ್ ಪ್ರಸಾದ್‍ ಇದಕ್ಕೂ ಮೊದಲು ‘ಒಂದು ಮೊಟ್ಟೆಯ ಕಥೆ’ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ತಾವೂ ರೂಪಾಂತರಗೊಂಡಿರುವ ಕುರಿತು ಹೇಳಿದ ಅವರು, ‘ನಾವು ಇಷ್ಟು ದಿನ ಮಂಗಳೂರಿನ ಭಾಷೆ ಮತ್ತು ಸೊಗಡು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೆವು. ಹೊರಗೆ ಬಂದು ಬೇರೆ ತರಹದ ಸಿನಿಮಾ ಮಾಡೋಣ ಎಂಬ ಆಸೆ ಇತ್ತು. ಕಾರಣಾಂತರಗಳಿಂದ ಅದು ನಿಧಾನವಾಯ್ತು. ಈ ಚಿತ್ರದಿಂದ ಅದು ಸಾಧ್ಯವಾಗಿದೆ. ಇಲ್ಲಿ ಮಂಗಳೂರಿನ ಸೊಗಡಿಲ್ಲ. ಅಲ್ಲಿ ಚಿತ್ರೀಕರಣವನ್ನೂ ಮಾಡಿಲ್ಲ. ರಾಜ್ಯದ ಬೇರೆಬೇರೆ ಮೂಲೆಗಳ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಒಂದರ್ಥದಲ್ಲಿ ನಾವು ಸಹ ಈ ಚಿತ್ರದ ಮೂಲಕ ‘ರೂಪಾಂತರ’ ಆಗಿದ್ದೇವೆ’ ಎಂದರು.

ಮಿಥುನ್‍ ಮುಕುಂದನ್‍ ಸಂಗೀತ ಮತ್ತು ಪ್ರವೀಣ್‍ ಶ್ರೀಯಾನ್‍ ಛಾಯಾಗ್ರಹಣವಿರುವ ‘ರೂಪಾಂತರ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ ಜೊತೆಗೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮುಂತಾದವರು ನಟಿಸಿದ್ದಾರೆ.