ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಎದುರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಏಪ್ರಿಲ್ 14 ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಈ ಪ್ರಕರಣವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ದುಷ್ಕರ್ಮಿಗಳು ಹಾರಿಸಿರುವ ಕೆಲ ಗುಂಡುಗಳು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೂ ತಗುಲಿವೆ. ಈ ಗುಂಡಿನ ದಾಳಿಗೆ ವಿದೇಶಿ ಪಿಸ್ತೂಲ್ ಅನ್ನು ಬಳಕೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳ ಹುಡುಕಾಟ ಮುಂದುವರಿಸಿದ್ದಾರೆ.
ಈ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಬೈಕ್, ಪನ್ವೆಲ್ ಪ್ರದೇಶದ ನಿವಾಸಿಯೊಬ್ಬರ ಹೆಸರಿನಲ್ಲಿ ನೋಂದಣಿ ಆಗಿರುವುದು ತಿಳಿದುಬಂದಿದೆ. ಬೈಕ್ ಮಾಲೀಕನ ನೆಲೆ ಪತ್ತೆಹಚ್ಚಿದ ಪೋಲಿಸರು ವಿಚಾರಣೆಗೆ ಒಳಪಡಿಸಿದರು. ದುಷ್ಕರ್ಮಿಗಳು ಚರ್ಚ್ ಬಳಿ ಬೈಕ್ ಬಿಟ್ಟು, ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾರೆ. ಬಳಿಕ ಆಟೋ ಮೂಲಕ ಬಾಂದ್ರಾ ರೈಲ್ವೆ ನಿಲ್ದಾಣ ತಲುಪಿ, ಅಲ್ಲಿಂದ ರೈಲಿನಲ್ಲಿ ಸಾಂತಾಕ್ರೂಜ್ ನಿಲ್ದಾಣದಲಿ ಇಳಿದಿದ್ದಾರೆ. ಅಲ್ಲಿಂದ ನಡೆದುಕೊಂಡು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗುಂಡಿನ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.





