Mysore
21
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಈ ಬಾರಿಯೂ ಅಭಿಮಾನಿಗಳ ಜೊತೆಗೆ ಗಣೇಶ್‍ ಹುಟ್ಟುಹಬ್ಬವಿಲ್ಲ

‘ಗೋಲ್ಡನ್‍ ಸ್ಟಾರ್‍’ ಗಣೇಶ್ ಇಂದು (ಜುಲೈ 02) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯಾದರೂ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಹುಟ್ಟುಹಬ್ಬದ ದಿನದಂದು ತಾವು ತಮ್ಮ ಮನೆಯಲ್ಲಿ ಇರದಿರುವುದರಿಂದ ಮನಗೆ ಬರದೆ, ಇದ್ದಲ್ಲಿ ಹರಸಿ, ಹಾರೈಸಿ ಎಂದು ಕೇಳಿಕೊಂಡಿದ್ದಾರೆ.

ಗಣೇಶ್‍ ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿಲ್ಲ. ಹುಟ್ಟುಹಬ್ಬದ ದಿನದಂದು ಗಣೇಶ್‍ ಅವರನ್ನು ಭೇಟಿ ಮಾಡಬೇಕೆಂದು ಅಭಿಮಾನಿಗಳು ಸಹ ಹಂಬಲಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಗಣೇಶ್‍ ಅವರನ್ನು ಹುಟ್ಟುಹಬ್ಬದ ದಿನ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ವರ್ಷವಾದರೂ ಅದು ಸಾಧ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ, ಅದು ಈ ವರ್ಷವೂ ಸಾಧ್ಯವಿಲ್ಲ. ಈ ಕುರಿತು ಸ್ವತಃ ಗಣೇಶ್‍ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ‘ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ . ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ,ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್’ ಎಂದು ಗಣೇಶ್‍ ಬರೆದುಕೊಂಡಿದ್ದಾರೆ.

ಇನ್ನು ಗಣೇಶ್‍ ಅಭಿನಯದ 41ನೇ ಚಿತ್ರವಾದ ‘ಕೃಷ್ಣಂ ಪ್ರಣಯ ಸಖಿ’ ಇದೇ ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಗಣೇಶ್‍ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ರುದ್ರಪ್ಪ ನಿರ್ಮಿಸಿದರೆ, ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಗಣೇಶ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ಹಾಡು ಅಥವಾ ಟೀಸರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

Tags:
error: Content is protected !!