Mysore
20
overcast clouds
Light
Dark

ಈ ಸ್ವಾತಂತ್ರ್ಯೋತ್ಸವಕ್ಕೆ ‘ಗೌರಿ’ ವರ್ಷಸ್‍ ‘ಕೃಷ್ಣ’ ವರ್ಸಸ್ ‘ಪೌಡರ್’

ಕನ್ನಡದಲ್ಲಿ ನಿರೀಕ್ಷಿತ ಚಿತ್ರಗಳು ಬರುತ್ತಿಲ್ಲ, ಬರೀ ಹೊಸಬರ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಪ್ರೇಕ್ಷಕರ ಬೇಸರದ ನಡುವೆಯೇ, ಈ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೂರು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿವೆ. ಪ್ರಮುಖವಾಗಿ, ಇಂದ್ರಜಿತ್‍ ಲಂಕೇಶ್‍ ನಿರ್ದೇಶನದ ‘ಗೌರಿ’, ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಮತ್ತು ದಿಗಂತ್‍ ಅಭಿನಯದ ‘ಪೌಡರ್’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮೊದಲು ಈ ದಿನಾಂಕದಂದು ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರೀಕರಣ ವಿಳಂಬವಾಗಿ, ಚಿತ್ರದ ಕೆಲಸಗಳು ಅಂದುಕೊಂಡಂತೆ ಮುಗಿಯದ ಕಾರಣ, ಚಿತ್ರವನ್ನು ಸೆಪ್ಟೆಂಬರ್‍ ತಿಂಗಳಿಗೆ ಮುಂದೂಡಲಾಗಿದೆ. ಅದೇ ದಿನ ರೋಹಿತ್‍ ಶೆಟ್ಟಿ ನಿರ್ದೇಶನದ, ಅಜಯ್‍ ದೇವಗನ್‍ ಅಭಿನಯದ ‘ಸಿಂಗಂ ಅಗೇನ್‍’ ಮತ್ತು ಅಲ್ಲು ಅರ್ಜುನ್‍ ಅಭಿನಯದ ಬಹುನಿರೀಕ್ಷೆಯ ಚಿತ್ರವಾದ ‘ಪುಷ್ಪ 2’ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡಗಳು ಘೋಷಿಸಿದ್ದವು. ಆದರೆ, ಕೆಲಸಗಳು ಮುಗಿಯದ ಕಾರಣ ಅವೆರಡೂ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಹೀಗೆ ನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋದ ಕಾರಣ, ಆ ಜಾಗಕ್ಕೆ ಇನ್ನಷ್ಟು ಚಿತ್ರಗಳು ಬಂದು ಸೇರಿಕೊಂಡಿದವೆ. ಕನ್ನಡದಿಂದ ‘ಗೌರಿ’, ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಪೌಡರ್’ ಚಿತ್ರಗಳಿದ್ದರೆ, ತೆಲುಗಿನಲ್ಲಿ ರಾಮ್‍ ಪೋತಿನೇನಿ ಅಭಿನಯದ ‘ಡಬಲ್‍ ಇಸ್ಮಾರ್ಟ್’ ಮತ್ತು ರವಿತೇಜ ಅಭಿನಯದ ‘ಮಿಸ್ಟರ್ ಬಚ್ಚನ್‍’ ಚಿತ್ರಗಳಿವೆ. ಇನ್ನು ತಮಿಳಿನಿಂದ ವಿಕ್ರಮ್‍ ಅಭಿನಯದ ‘ತಂಗಾಳನ್‍’ ಮತ್ತು ಹೊಂಬಾಳೆ ಫಿಲಂಸ್ ಸಂಸ್ಥೆಯು ತಮಿಳಿನಲ್ಲಿ ಮೊದಲ ಬಾರಿಗೆ ನಿರ್ಮಿಸಿರುವ ಕೀರ್ತಿ ಸುರೇಶ್‍ ಅಭಿನಯದ ‘ರಘು ತಥಾ’ ಚಿತ್ರಗಳಿವೆ. ಹಿಂದಿಯಲ್ಲಿ ಅಕ್ಷಯ್‍ ಕುಮಾರ್ ಅಭಿನಯದ ‘ಖೇಲ್‍ ಖೇಲ್‍ ಮೇ’, ಜಾನ್‍ ಅಬ್ರಹಾಂ ಅಭಿನಯದ ‘ವೇದ’ ಮತ್ತು ರಾಜಕುಮಾರ್ ರಾವ್‍ ಅಭಿನಯದ ‘ಸ್ತ್ರೀ 2’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.

ಇವೆಲ್ಲವೂ ದೊಡ್ಡ ಚಿತ್ರಗಳ ಪಟ್ಟಿಯಷ್ಟೇ. ಇದಲ್ಲದೆ ಸಣ್ಣ ಚಿತ್ರಗಳು ಅದೆಷ್ಟು ಬಿಡುಗಡೆಯಾಗುತ್ತವೋ ಗೊತ್ತಿಲ್ಲ. ಈ ಪಟ್ಟಿಯಲ್ಲಿ 10 ಪ್ಲಸ್ ಚಿತ್ರಗಳು ಸಿಗುತ್ತವೆ. ಇಷ್ಟೊಂದು ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಸ್ವಾತಂತ್ರ್ಯ ದಿನ ಗುರುವಾರದಂದು ಬರುತ್ತದೆ. ಶುಕ್ರವಾರವೊಂದು ರಜೆ ಹಾಕಿಕೊಂಡರೆ, ಶನಿವಾರ ಮತ್ತು ಭಾನುವಾರ ಸೇರಿ ನಾಲ್ಕು ದಿನಗಳು ಸಿಗುತ್ತವೆ. ಹೀಗೆ ಲಾಂಗ್‍ ವೀಕೆಂಡ್‍ ಇರುವುದರಿಂದ ಹಲವು ಚಿತ್ರಗಳು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿವೆ.