‘ಪಿನಾಕ’ ಚಿತ್ರವು ತಮ್ಮ ವೃತ್ತಿ ಬದುಕಿನಲ್ಲೇ ಒಂದು ವಿಭಿನ್ನವಾದ ಚಿತ್ರವಾಗಲಿದೆ ಎಂದು ಗಣೇಶ್ ಈ ಹಿಂದೆ ಹೇಳಿಕೊಂಡಿದ್ದರು. ಈಗ ಚಿತ್ರೀಕರಣ ಸಾಗುತ್ತಿದ್ದಂತೆ, ಆ ನಂಬಿಕೆ ಮತ್ತಷ್ಟು ಬಲವಾಗಿದೆ. ಈಗ ಮತ್ತೊಮ್ಮೆ ಅವರು ಇದೇ ಮಾತುಗಳನ್ನು ಹೇಳಿಕೊಂಡಿದ್ದಾರೆ.
‘ಪಿನಾಕ’ ಚಿತ್ರಕ್ಕಾಗಿ ನೆಲಮಂಗಲ ಬಳಿ ಆರು ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್ ಹಾಕಲಾಗಿದೆ. ಸೆಟ್ ಎಂದರೆ ಅದು 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯದ ಸೆಟ್ ನಿರ್ಮಿಸಲಾಗಿದೆ. ಇಲ್ಲಿ ಕಳೆದ 32 ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಇಲ್ಲೇ ಚಿತ್ರದ ಕಥೆಯ ಪ್ರಮುಖ ಘಟ್ಟ ನಡೆಯುವುದರಿಂದ ಈ ಸೆಟ್ ಗೌಪ್ಯವಾಗಿಡಲಾಗಿದೆ.
ತಮ್ಮ ಪಾತ್ರದ ಕುರಿತು ಮಾತನಾಡುವ ಗಣೇಶ್, ‘ಬಹಳ ಖುಷಿಕೊಟ್ಟ ಪಾತ್ರವಿದು. ಇದು ಬೇರೆ ತರಹದ ಸಿನಿಮಾ. ನನ್ನ ಚಿತ್ರಜೀವನದಲ್ಲಿ ವಿಭಿನ್ನವಾದ ಸಿನಿಮಾ. ನನ್ನ ಬಳಿ ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ತೀರ್ಮಾನದೊಂದಿಗೆ ನಿರ್ಮಾಪಕರು ಬಂದರು. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾನೆ. ಅವನು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ಅಂಕಗಳನ್ನು ತೆಗೆದಿದ್ದಾನೆ’ ಎಂದು ಖುಷಿಪಟ್ಟರು.
ಇನ್ನು, ಗಣೇಶ್ ಭಾಷಾಜ್ಞಾನ ಅದ್ಭುತ. ಅವರ ಮಾತಲ್ಲಿ ಒಂದು ಅಪಶಬ್ಧ ಬರುವುದಿಲ್ಲ ಎಂದು ಹಿರಿಯ ನಟ ಶ್ರೀನಿವಾಸಮೂರ್ತಿ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಗಣೇಶ್, ‘ನನ್ನ ಮಾತೃಭಾಷೆಯನ್ನು ನಾನು ಚೆನ್ನಾಗಿ ಮಾತಾಡದೆ, ಇನ್ಯಾರು ಚೆನ್ನಾಗಿ ಮಾತಾಡ್ತಾರೆ? ಇದು ನನ್ನ ಭಾಷೆ. ನಾನು ಡಾ. ರಾಜಕುಮಾರ್, ವಿಷ್ಣುವರ್ಧನ್, ಭೋಜರಾಜನ (ಶ್ರೀನಿವಾಸಮೂರ್ತಿ) ಸಿನಿಮಾ ನೋಡಿ ಭಾಷೆ ಕಲಿತು ಬೆಳೆದವನು. ಭೋಜರಾಜನ ಹತ್ತಿರ ಗಣೇಶನ ಭಾಷೆ ಚೆನ್ನಾಗಿದೆ ಅಂದರೆ ಇದಕ್ಕಿಂತ ಅವಾರ್ಡ್ ಇನ್ನೇನು ಬೇಕು? ಪ್ರತಿದಿನ ಚಿತ್ರೀಕರಣ ಮಾಡುವಾಗ, ಶ್ರೀನಿವಾಸಮೂರ್ತಿ ಅವರ ಬಳಿ ಸಂಭಾಷಣೆ ಹೇಳಿ, ಇದು ಸರಿಯೇ? ಎಂದು ಕೇಳುತ್ತಿದ್ದೆ. ಅವರು ಮಾರ್ಗದರ್ಶನ ಮಾಡುತ್ತಿದ್ದರು. ನನ್ನ ಬಗ್ಗೆ ಏನೇ ಚೆನ್ನಾಗಿದೆ ಎಂದು ಹೇಳಿದರೂ, ಅದು ತಂಡಕ್ಕೆ ಸೇರಬೇಕು, ನನಗೊಬ್ಬನಿಗಲ್ಲ’ ಎಂದರು ಗಣೇಶ್.
ಈ ಸಂದರ್ಭದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್, ಛಾಯಾಗ್ರಾಹಕ ಕರಮ್ ಚಾವ್ಲಾ, ನಿರ್ದೇಶಕ ಧನಂಜಯ್, ನಿರ್ಮಾಣದ ಉಸ್ತುವಾರಿ ಹೊತ್ತಿರುವ ವಿಜಯಾ ಮುಂತಾದವರು ಹಾಜರಿದ್ದರು. ಈ ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ.





