Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

‘ದುನಿಯಾ’ ವಿಜಯ್‍ ನಿರ್ದೇಶನದ ಚಿತ್ರದಲ್ಲಿ ನಟಿಸಲು ಗಣೇಶ್‍ ಒಪ್ಪಿಗೆ …

‘ದುನಿಯಾ’ ವಿಜಯ್‍ ಮತ್ತು ಗಣೇಶ್‍ ಇಬ್ಬರೂ ಹಲವು ವರ್ಷಗಳ ಗೆಳೆಯರು. ನಾಯಕರಾಗುವುದಕ್ಕಿಂದ ಮುನ್ನ ಇಬ್ಬರೂ ಸಾಕಷ್ಟು ಸೈಕಲ್ ಹೊಡೆದು ಚಿತ್ರರಂಗದಲ್ಲಿ ಬೆಳೆದವರು. ಇಬ್ಬರೂ ಸಾಕಷ್ಟು ಬೆಳೆದರೂ, ಅವರಿಬ್ಬರ ಗೆಳೆತನ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗ ಗಣೇಶ್‍ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂದು ‘ದುನಿಯಾ’ ವಿಜಯ್‍ ಆಸೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಗಣೇಶ್‍ ಸಹ ಒಪ್ಪಿಗೆ ಸೂಚಿಸಿದ್ದಾರೆ.

‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಆಗಸ್ಟ್ 09ರಂದು ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಇನ್ನು, ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಎರಡು ದಶಕಗಳ ಸ್ನೇಹಿತರು ಒಟ್ಟಿಗೆ ಸಿಕ್ಕಿದ್ದಾರೆ. ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವುದರ ಜೊತೆಗೆ ತಾವು ನಡೆದು ಬಂದ ಹಾದಿಯ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್‍ ಅಭಿನಯದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುವ ಆಸೆಯನ್ನು ‘ದುನಿಯಾ’ ವಿಜಯ್‍ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ‘ದುನಿಯಾ’ ವಿಜಯ್‍, ‘ನನಗೊಂದು ಆಸೆ ಇದೆ. ನನ್ನ ನಿರ್ದೇಶನದಲ್ಲಿ, ನಮ್ಮಿಬ್ಬರ ಕಾಂಬಿನೇಷನ್‍ನಲ್ಲಿ ಒಂದು ಚಿತ್ರ ಮಾಡಬೇಕು. ಅದು ದಾಖಲೆಯಾಗಿ ಉಳಿಯಬೇಕು.. ಎಷ್ಟೇ ದುಃಖ ಇದ್ದರೂ ಮರೆಸಿ ನಗಿಸುವ ತಾಕತ್ತು ನಿನಗಿದೆ. ಎಮೋಷನಲ್‍ ದೃಶ್ಯಗಳಲ್ಲೂ ಅಷ್ಟೇ. ನಿನ್ನ ಸಾಮರ್ಥ್ಯವೇ ಬೇರೆ. ಅದು ನನ್ನಿಂದ ಸಾಧ್ಯವಿಲ್ಲ. ನಿನ್ನಲ್ಲಿರುವ ಆ ಸಾಮರ್ಥ್ಯವನ್ನ ನೋಡಿ, ನಿನ್ನ ಜೊತೆಗೆ ಚಿತ್ರ ಮಾಡಬೇಕು ಎಂಬ ಆಸೆ ಇದೆ. ಒಂದೊಳ್ಳೆಯ ವಿಷಯ ಇಟ್ಟುಕೊಂಡು ಸಿನಿಮಾ ಮಾಡೋಣ. ಯೋಚನೆ ಮಾಡುತ್ತಲೇ ಇದ್ದೇನೆ. ಒಂದು ವಿಷಯ ಸಿಗಬೇಕು ಅಷ್ಟೇ. ಸಿಕ್ಕರೆ ಖಂಡಿತಾ ಬಿಡುವುದು ಬೇಡ. ಒಟ್ಟಿಗೆ ಚಿತ್ರ ಮಾಡೋಣ’ ಎಂದು ವಿಜಯ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗಣೇಶ್, ‘ನೀನು ಯಾವಾಗ ಹೇಳ್ತೀಯೋ, ನಾನು ಬಂದು ನಟಿಸುವುದಕ್ಕೆ ರೆಡಿ. ನೀನು ಸ್ಕ್ರಿಪ್ಟ್ ಮಾಡು. ನಾವಿಬ್ಬರೂ ಖಂಡಿತವಾಗಿ ಜೊತೆಯಾಗಿ ಕೆಲಸ ಮಾಡೋಣ. ಇಂಥಾ ದಿನ ಶೂಟಿಂಗ್ ಅಂತ ಹೇಳು. ನಾನು ಬರ್ತೀನಿ’ ಎಂದು ಹೇಳಿದ್ದಾರೆ.

ಒಟ್ಟಿಗೆ ಚಿತ್ರ ಮಾಡಬೇಕು ಎಂಬುದು ವಿಜಯ್‍ ಮತ್ತು ಗಣೇಶ್‍ ಆಸೆಯಷ್ಟೇ ಅಲ್ಲ, ಅವರಿಬ್ಬರ ಅಭಿಮಾನಿಗಳ ಆಸೆಯೂ ಹೌದು. ಇದು ಸಾಧ್ಯವಾದಷ್ಟೂ ಬೇಗ ಕಾರ್ಯರೂಪಕ್ಕೆ ಬರಲಿ.

Tags:
error: Content is protected !!