ಆರ್. ಚಂದ್ರು ಈ ವರ್ಷ ಪ್ರಾರಂಭಿಸಿದ ಆರ್.ಸಿ.ಸ್ಟುಡಿಯೋಸ್‍ನಡಿ ಪ್ರಾರಂಭವಾದ ಮೊದಲ ಚಿತ್ರ ‘ಫಾದರ್’, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ತಂದೆ-ಮಗನ ಸಂಬಂಧದ ಕುರಿತಾದ ಚಿತ್ರ ಇದಾಗಿದ್ದು, ತಂದೆಯಾಗಿ ಪ್ರಕಾಶ್ ರೈ ಮತ್ತು ಮಗನಾಗಿ ‘ಡಾರ್ಲಿಂಗ್’ ಕೃಷ್ಣ ನಟಿಸುತ್ತಿದ್ದಾರೆ.
ರಾಜ್ ಮೋಹನ್ ನಿರ್ದೇಶನದಲ್ಲಿ ‘ಫಾದರ್’ ಚಿತ್ರವು ಮೂಡಿಬರುತ್ತಿದ್ದು ಕೊನೆಯ ಹಂತದ ಶೂಟಿಂಗ್ ಆನೇಕಲ್ ತಾಲೂಕಿನ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯಿತು. ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜನ ಜೂನಿಯರ್ ಆರ್ಟಿಸ್ಟ್ ಗಳ ಸಮ್ಮುಖದಲ್ಲಿ ‘ಫಾದರ್’ ಚಿತ್ರದ ಸಾಹಸ ದೃಶ್ಯಗಳು ಚಿತ್ರೀಕರಣವಾಗಿದೆ. ಕೃಷ್ಣ ಫೈಟರ್‍ಗಳೊಂದಿಗೆ ಸೆಣಸಾಡುವ ದೃಶ್ಯಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಈ ಹಿಂದೆ ‘ಬೈರಾಗಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ರಾಜ್ ಮೋಹನ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಮ್ ಮೋಹನ್ ಅವರಿಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ನಿರ್ದೇಶಕ ದಯಾಳ್ ಪದ್ಮನಾಭನ್, ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜ್ಞಾನಮೂರ್ತಿ ಛಾಯಾಗ್ರಹಣ ‘ಹನುಮಾನ್’ ಖ್ಯಾತಿಯ ಗೌರಾ ಹರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ, ಪ್ರಕಾಶ್ ರೈ, ಅಮೃತಾ ಅಯ್ಯಂಗಾರ್, ತೆಲುಗು ನಟ ಸುನೀಲ್ ಮುಂತಾದವರು ನಟಿಸಿದ್ದಾರೆ.
ಇದಲ್ಲದೆ ಆರ್. ಚಂದ್ರು ಅವರ ಆರ್.ಸಿ. ಸ್ಟುಡಿಯೋಸ್ ವತಿಯಿಂದ ‘ಶ್ರೀ ರಾಮ ಬಾಣ’, ‘ಕಬ್ಜ 2’, ‘ಪಿಓಕೆ’ ಮತ್ತು ‘ಡಾಗ್’ ಚಿತ್ರಗಳು ನಿರ್ಮಾಣವಾಗುತ್ತಿದೆ.





