ಯುವ ಅಭಿನಯದ ‘ಎಕ್ಕ’ ಚಿತ್ರವು ಜೂನ್.06ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಚಿತ್ರವು ಇದೀಗ ಜುಲೈ.18ರಂದು ಬಿಡುಗಡೆಯಾಗಲಿದೆ. ಈ ಸಂಬಂಧ ಚಿತ್ರತಂಡವು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.
`ಎಕ್ಕ’ ಚಿತ್ರದ ಚಿತ್ರೀಕರಣ ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಗಿತ್ತು. ಮುಹೂರ್ತದ ದಿನವೇ ಚಿತ್ರವನ್ನು ಜೂನ್.06ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರದ ಬಿಡುಗಡೆ ಹತ್ತಿರ ಬಂದರೂ, ಚಿತ್ರದ ಕೆಲಸಗಳು ಪೂರ್ತಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿತ್ರದ ಬಿಡುಗಡೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಜುಲೈ.18ರಂದು ಚಿತ್ರ ಬಿಡುಗಡೆಯಾಗಲಿದೆ.
ರೋಹಿತ್ ಪದಕಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯುವಗೆ ಸಂಜನಾ ಆನಂದ್ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಪೂರ್ಣಚಂದ್ರ ಮೈಸೂರು, ಪುನೀತ್ ರುದ್ರನಾಗ್, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳಾದ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ ಒಂಬತ್ತು ಸೆಕೆಂಡ್ ಇರುವ ಟೀಸರ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಮಗು-ಮೃಗ ಎಂದು ಮಸ್ತ್ ಡೈಲಾಗ್ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದು ಇಲ್ಲಿಗೆ ನಿಲ್ಲೋದಿಲ್ಲ …’ ಎಂದು ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.





