‘ದುನಿಯಾ’ ವಿಜಯ್ ಅಭಿನಯದಲ್ಲಿ ಎಸ್. ನಾರಾಯಣ್ ಇದಕ್ಕೂ ಮೊದಲು ‘ಚಂಡ’ ಹಾಗೂ ‘ದಕ್ಷ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಈಗ ಮೂರನೆಯ ಚಿತ್ರವಾಗಿ, ‘ಮಾರುತ’ ಮೂಡಿಬಂದಿದೆ. ಈ ಚಿತ್ರದಲ್ಲಿ ವಿಜಯ್ ಜೊತೆಗೆ ಹಿರಿಯ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ಮಂಜು ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರವನ್ನು ಕೆ. ಮಂಜು ಹಾಗೂ ರಮೇಶ್ ಯಾದವ್ ಜೊತೆಯಾಗಿ ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ದುನಿಯಾ’ ವಿಜಯ್ ನಟನೆಯ ‘ರಜನಿಕಾಂತ’ ಹಾಗೂ ‘ಶಂಕರ್ ಐ.ಪಿ.ಎಸ್’ ಚಿತ್ರಗಳನ್ನು ಕೆ. ಮಂಜು ನಿರ್ಮಿಸಿದ್ದರು. ನಿರ್ಮಾಪಕ ರಮೇಶ್ ಯಾದವ್ ಅವರಿಗೆ ವಿಜಯ್ ಅವರ ಜೊತೆಗೆ ಇದು ಮೊದಲ ಚಿತ್ರ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿದೆ.
‘ಮಾರುತ’ ಪ್ರತಿಯೊಬ್ಬರ ಮನೆಯ ಕಥೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಒಂದು ಭೂತದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಸುತ್ತ ಈ ಚಿತ್ರ ಸುತ್ತುತ್ತದಂತೆ.
ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು.
‘ಮಾರುತ’ ಚಿತ್ರದಲ್ಲಿ ವಿಜಯ್, ಶ್ರೇಯಸ್ ಮಂಜು ಜೊತೆಗೆ ಬೃಂದಾ ಆಚಾರ್ಯ, ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಮುಂತಾದವರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ವಿ. ರವಿಚಂದ್ರನ್ ಸಹ ನಟಿಸಿದ್ದಾರಂತೆ.
ಎಸ್. ನಾರಾಯಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್, ದಾಸ್ ಛಾಯಾಗ್ರಹಣವಿದೆ.