Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾಚಯ್ಯ’ ಆದ ‘ದುನಿಯಾ’ ವಿಜಯ್‍; ಹೊಸ ಚಿತ್ರಕ್ಕೆ ನಾಮಕರಣ

‘ದುನಿಯಾ’ ವಿಜಯ್‍ ಅಭಿನಯದ 29ನೇ ಚಿತ್ರಕ್ಕೆ ಚಿತ್ರೀಕರಣ ಕೆಲವು ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದು, ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಸಹ ಮುಗಿದಿದೆ. ಇದೀಗ ಮೂರನೇ ಹಂತದ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಿದ್ದು, ಚಿತ್ರಕ್ಕೆ ‘ರಾಚಯ್ಯ’ ಎಂದು ಹೆಸರಿಡಲಾಗಿದೆ.

ಈ ಹಿಂದೆ ‘ರಾಜಹಂಸ’, ‘ಜಂಟಲ್‍ಮ್ಯಾನ್‍’ ಮತ್ತು ‘ಗುರು ಶಿಷ್ಯರು’ ಚಿತ್ರಗಳನ್ನು ನಿರ್ದೇಶಿಸಿದ್ದ ಮತ್ತು ದರ್ಶನ್‍ ಅಭಿನಯದ ‘ಕಾಟೇರ’ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿದ್ದ ಜಡೇಶ್‍ ಹಂಪಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಒಂದು ದಶಕದ ಹಿಂದೆ ದರ್ಶನ್‍ ಅಭಿನಯದ ‘ಸಾರಥಿ’ ಚಿತ್ರವನ್ನು ನಿರ್ಮಿಸಿದ್ದ ಕೆ.ವಿ. ಸತ್ಯಪ್ರಕಾಶ್‍ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ ಈ ಚಿತ್ರಕ್ಕಿದೆ.

ಈ ಚಿತ್ರಕ್ಕೆ ಕೆ. ಶಿವರಾಮ ಕಾರಂತರ ‘ಚೋಮನ ದುಡಿ’ಯ ಚೋಮನ ಪಾತ್ರ ಸ್ಪೂರ್ತಿ ಎಂದು ನಿರ್ದೇಶಕ ಜಡೇಶ್‍ ಮುಹೂರ್ತದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಇದು ಪ್ರತಿ ಹಳ್ಳಿಯಲ್ಲೂ ನಡೆಯುವ ಕಥೆ ಎನ್ನುವ ಜಡೇಶ್‍, ‘ಈ ಕಥೆಯನ್ನು ಕೋಲಾರದ ಹಿನ್ನೆಲೆಯಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ಈ ಹಿಂದೆ ವಿಜಯ್‍ ಅವರು ‘ಜಂಗ್ಲಿ’ ಚಿತ್ರದಲ್ಲಿ ಕೋಲಾರ ಸೊಗಡನ್ನು ತಮ್ಮ ಸಂಭಾಷಣೆಗಳ ಮೂಲಕ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದರು. ಹಾಗಾಗಿ, ಕೋಲಾರದ ಹಿನ್ನೆಲೆಯಲ್ಲಿ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರಕ್ಕೆ ಕೆ. ಶಿವರಾಮ ಕಾರಂತರ ‘ಚೋಮನ ದುಡಿ’ಯ ಚೋಮನ ಪಾತ್ರ ಸ್ಪೂರ್ತಿ. ಹಾಗಂತ ಎರಡೂ ಪಾತ್ರಗಳಿಗೆ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿದ್ದರು.

ಈ ಚಿತ್ರದಲ್ಲಿ ವಿಜಯ್‍, ತಮ್ಮ ವಯಸ್ಸಿನ ಪಾತ್ರವನ್ನೇ ಮಾಡುತ್ತಿದ್ದಾರಂತೆ. ‘ಈ ಚಿತ್ರದಲ್ಲಿ ಅವರ ಪಾತ್ರವೇ ಜೀವಾಳ. 90ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ನೈಜ ಘಟನೆಗಳನ್ನಾಧರಿಸಿ ಈ ಚಿತ್ರ ಮಾಡುತ್ತಿದ್ದೇನೆ. ನಾನು ನೋಡಿದ, ಕೇಳಿದ ಮತ್ತು ಓದಿದ ಘಟನೆಗಳನ್ನಾಧರಿಸಿ ಈ ಚಿತ್ರ ಮಾಡುತ್ತಿದ್ದೇನೆ’ ಎಂದು ಜಡೇಶ್‍ ಹೇಳಿದ್ದರು.

‘ರಾಚಯ್ಯ’ ಮೂಲಕ ವಿಜಯ್‍ ಮಗಳು ಮೋನಿಕಾ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ತಮ್ಮ ಹೆಸರನ್ನು ರಿತನ್ಯಾ ಎಂದು ಬದಲಾಯಿಸಿಕೊಂಡಿದ್ದಾರೆ. ಮಿಕ್ಕಂತೆ ‘ಡೇರ್‍ ಡೆವಿಲ್‍ ಮುಸ್ತಾಫ’ ಖ್ಯಾತಿಯ ಶಿಶಿರ, ರಚಿತಾ ರಾಮ್‍, ರಾಜ್‍ ಬಿ ಶೆಟ್ಟಿ, ಉಮಾಶ್ರೀ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ರಾಚಯ್ಯ’ ಚಿತ್ರದ ಮೊದಲ ನೋಟ ನವೆಂಬರ್‍ ಒಂದರಂದು ಬಿಡುಗಡೆ ಆಗಲಿದೆ.

Tags: