ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಬೇರೆ ಭಾಷೆಗಳ ಮತ್ತು ರಾಜ್ಯ ವಿತರಣೆ ಮತ್ತು ಹಕ್ಕುಗಳಿಗೆ ಭಾರೀ ಬೇಡಿಕೆ ಇದ್ದು, ಈಗಾಗಲೇ ಕೆಲವು ಭಾಷೆಗಳ ಹಕ್ಕುಗಳು ಮಾರಾಟವಾಗಿದೆ.
ಕಳೆದ ತಿಂಗಳಷ್ಟೇ ‘ಕಾಂತಾರ – ಚಾಪ್ಟರ್ 1’ ಚಿತ್ರದ ತೆಲುಗು ಡಬ್ಬಿಂಗ್ ಮತ್ತು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳು ಬರೋಬ್ಬರಿ 100 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಇದೀಗ ಪೃಥ್ವಿರಾಜ್ ಮತ್ತು ಸುಪ್ರಿಯಾ ಮೆನನ್ ಅವರು ಪೃಥ್ವಿರಾಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಲನಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಇನ್ನು, ಈ ಚಿತ್ರದ ಹಿಂದಿಯ ಡಬ್ಬಿಂಗ್ ಮತ್ತು ಉತ್ತರಭಾರತ ಮತ್ತು ನೇಪಾಳದ ವಿತರಣೆ ಹಕ್ಕುಗಳನ್ನು AA Films ಸಂಸ್ಥೆಯು ತನ್ನದಾಗಿಸಿಕೊಂಡಿದೆ. ಬಾಲಿವುಡ್‍ನ ಖ್ಯಾತ ನಟಿ ರವೀನಾ ಟಂಡನ್ ಅವರ ಪತ್ನಿ ಅನಿಲ್ ಥಡಾನಿ ಒಡೆತನದ AA Films ಸಂಸ್ಥೆಯು ಇದಕ್ಕೂ ಮೊದಲು ‘ಕೆಜಿಎಫ್’, ‘ಕಾಂತಾರ’ ಸೇರಿದಂತೆ ಕೆಲವು ಚಿತ್ರಗಳ ವಿತರಣೆ ಮತ್ತು ಡಬ್ಬಿಂಗ್ ಹಕ್ಕುಗಳನ್ನು ತನ್ನದಾಗಿಸಿಕೊಂಡು, ಉತ್ತರ ಭಾರತದಲ್ಲಿ ದೊಡ್ಡ ಮಟ್ಟಿಗೆ ಬಿಡುಗಡೆ ಮಾಡಿದೆ. ಈಗ ಆ ಸಾಲಿಗೆ ‘ಕಾಂತಾರ – ಚಾಪ್ಟರ್ 1’ ಸಹ ಸೇರಿದೆ. ಚಿತ್ರದ ಓವರ್ಸೀಸ್ ಹಕ್ಕುಗಳನ್ನು PHF ಸಂಸ್ಥೆಯು ಪಡೆದುಕೊಂಡಿದ್ದು, ಅದರಲ್ಲಿ ಇಂಗ್ಲೆಂಡ್ ಭಾಗದಲ್ಲಿ ಲಾಫಿಂಗ್ ವಾಟರ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಬಿಡುಗಡೆ ಮಾಡುತ್ತಿದೆ.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆದೆ.
ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನನದ ‘RRR’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ ಟೊಡರ್ ಲ್ಯಾಜರೋವ್, ಈ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ.





