ಉಪೇಂದ್ರ ಅಭಿನಯದ ‘UI’ ಚಿತ್ರವು ಡಿ. 20ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕೆಲವರು ಚಿತ್ರದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡುವುದರ ಜೊತೆಗೆ, ಇದು ಉಪೇಂದ್ರ ಅವರ ಅತ್ಯುತ್ತಮ ಚಿತ್ರ ಎಂದರೆ, ಇನ್ನೂ ಕೆಲವರು ಉಪೇಂದ್ರ ಸುಖಾಸುಮ್ಮನೆ ಗೊಂದಲಗೊಳಿಸಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಚಿತ್ರವು ಒಂದು ವಾರ ಪೂರೈಸಿದೆ. ಈ ಒಂದು ವಾರದಲ್ಲಿ ಚಿತ್ರದ ಗಳಿಕೆ ಎಷ್ಟಾಗಿತ್ತು ಎಂದು ಹುಡುಕುತ್ತಾ ಹೋದರೆ, 26 ಕೋಟಿ ರೂ. ಎಂಬ ಉತ್ತರ ಸಿಗುತ್ತದೆ. ಬಾಕ್ಸ್ ಆಫೀಸ್ ಟ್ರಾಕರ್ ಸಚ್ನಿಕ್ ಡಾಟ್‍ಕಾಮ್ ಪ್ರಕಾರ, ಚಿತ್ರವು ಮೊದಲ ವಾರ 26 ಕೋಟಿ ಸಂಪಾದಿಸಿದೆಯಂತೆ. ಈ ಪೈಕಿ ಮೊದಲ ಮೂರು ದಿನಗಳ ಕಾಲ ಚಿತ್ರ 18 ಕೋಟಿ ರೂ.ಗಳವರೆಗೂ ಸಂಪಾದಿಸಿದೆ. ನಂತರದ ನಾಲ್‍ಕು ದಿನಗಳಲ್ಲಿ ಗಳಿಕೆಯ ಪ್ರಮಾಣ ಕಡಿಮೆಯಾಗಿದೆ.
ಇನ್ನು, ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾದರೂ, ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದರೂ, ಕರ್ನಾಟಕದಲ್ಲಿ ಮಾತ್ರ ಅತೀ ಹೆಚ್ಚು ಗಳಿಕೆಯಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಗಳಿಕೆ ಸುಮಾರಾಗಿದೆ. ಮಿಕ್ಕಂತೆ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಗಳಿಕೆಯೇ ಇಲ್ಲ. ಮೊದಲ ವಾರದ ಗಳಿಕೆ ಕರ್ನಾಟಕದಿಂದ 22 ಕೋಟಿ ರೂ.ನಷ್ಟು ಬಂದರೆ, ಮಿಕ್ಕ ರಾಜ್ಯಗಳಿಂದ ನಾಲ್ಕು ಕೋಟಿಯಷ್ಟು ಗಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಗಳಿಕೆಯಲ್ಲಿ ನಿರ್ಮಾಪಕರ ಪಾಲು 14 ಕೋಟಿ ರೂ.ಗಳಷ್ಟಾಗುತ್ತದೆ. ಚಿತ್ರದ ಬಜೆಟ್ 30 ಕೋಟಿಗೂ ಮೀರಿದ್ದು, ಬಾಕ್ಸ್ ಆಫೀಸ್‍ನಿಂದ 14 ಕೋಟಿ ಬಂದರೆ, ಒಂದಿಷ್ಟು ಜೀ ಕನ್ನಡದಿಂದ ಬಂದಿದೆ. ನಿರ್ಮಾಪಕರು ಹಾಕಿದ ಬಂಡವಾಳವನ್ನು ಮರಳಿ ಪಡೆಯಲು ಇನ್ನಷ್ಟು ಸಮಯ ಕಾಯಬೇಕು.
‘UI’ ಚಿತ್ರವನ್ನು ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‍ಟೈನರ್ಸ್ ಸಂಸ್ಥೆಗಳಡಿ ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.





