ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಲಿಂಕ್’ ಮತ್ತು ‘ಕೆಟಿಎಂ’ ಚಿತ್ರಗಳು ಕಳೆದ ವರ್ಷ ಬಿಡುಗಡೆಯಾದ ನಂತರ, ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿರುವ ದೀಕ್ಷಿತ್, ಈ ಮಧ್ಯೆ ಸದ್ದಿಲ್ಲದೆ ಒಂದು ಚಿತ್ರವನ್ನು ಮುಗಿಸಿದ್ದಾರೆ. ಅದೇ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’.
ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ಈ ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದ್ದು, ಜುಲೈನಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದ ‘ಹರಿ ಓಂ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಮೊದಲ ಹಾಡನ್ನು ಲಹರಿ ಸಂಸ್ಥೆಯ MRT ಮ್ಯೂಸಿಕ್ ಮೂಲಕ ಬಿಡುಗಡೆ ಮಾಡಲಾಗಿದೆ.
ನಾಗಾರ್ಜುನ ಶರ್ಮ ಬರೆದಿರುವ ‘ಹರ ಓಂ’ ಎಂಬ ಶಿವನ ಕುರಿತಾದ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಹಾಡು ಸಹ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಶಿಲ್ಪ ಹಾಗೂ ತೆಲುಗಿನಲ್ಲಿ ಖ್ಯಾತ ಗಾಯಕಿ ಮಂಗ್ಲಿ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಉಷಾ ಭಂಡಾರಿ ಹಾಗೂ ದರ್ಶನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಎಚ್.ಕೆ. ಪ್ರಕಾಶ್ ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಎಂ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಇದಕ್ಕೂ ಮೊದಲು ‘ಸಿಂಪಲ್’ ಸುನಿ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದವರು. ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಸೇರಿ ಪಿನಾಕ ಎಂಬ VFX ಸ್ಟುಡಿಯೋ ಸಹ ನಡೆಸುತ್ತಿದ್ದಾರೆ. ಈಗ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಿರ್ಮಾಪಕ ಪ್ರಕಾಶ್ ಅವರು ‘ಅವನ್ನೇ ಶ್ರೀಮನ್ನಾರಾಯಣ’ ಚಿತ್ರದ ಸಮಯದಿಂದಲೂ ಪರಿಚಯ. ಈ ಚಿತ್ರದ ಕಥೆ ಕೇಳಿದ ಅವರು ನಿರ್ಮಾಣಕ್ಕೆ ಮುಂದಾದರು. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಈ ಹಾಡು ಬರುತ್ತದೆ. ಚಿತ್ರದ ಕಥೆಗೆ ಹಾಗೂ ಈ ಹಾಡಿಗೂ ಸಂಬಂಧವಿದೆ’ ಎಂದರು.
ದೀಕ್ಷಿತ್ ಶೆಟ್ಟಿ ಮಾತನಾಡಿ, ‘ಕಳೆದ ವರ್ಷ ಇದೇ ಸಮಯಕ್ಕೆ ನನ್ನ ‘ಬ್ಲಿಂಕ್’ ಚಿತ್ರ ಬಿಡುಗಡೆಯಾಗಿತ್ತು. ಇಂದು ಬಿಡುಗಡೆಯಾಗಿರುವ ಈ ಚಿತ್ರದ ಹಾಡು ತುಂಬಾ ಚೆನ್ನಾಗಿದೆ. ವಿಶೇಷವೆಂದರೆ ಈ ಹಾಡಿನಲ್ಲಿ ನನ್ನ ಗುರುಗಳು ಹಾಗೂ ನಾನು ಪಾಠ ಹೇಳಿ ಕೊಟ್ಟಿರುವ ಹುಡುಗರು ಅಭಿನಯಿಸಿದ್ದಾರೆ’ ಎಂದರು.
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ದೀಕ್ಷಿತ್‍ಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಉಷಾ ಭಂಡಾರಿ, ಗೋಪಾಲಕೃಷ್ಣ ದೇಶಪಾಂಡೆ, ಶ್ರೀವತ್ಸ, ಅಶ್ವಿನ್ ರಾವ್ ಪಲ್ಲಕ್ಕಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದೆ.





