ಪ್ರತಿ ಚಿತ್ರದಲ್ಲೂ ವಿಭಿನ್ನವಾದ ಪರಿಕಲ್ಪನೆಯೊಂದಿಗೆ ಗುರುತಿಸಿಕೊಂಡಿರುವ ನಿರ್ದೇಶಕ ಮಧುಚಂದ್ರ ಇದೀಗ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ನಂತರ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು ‘ಮಿಸ್ಟರ್ ರಾಣಿ’.
‘ಮಿಸ್ಟರ್ ರಾಣಿ’ ಸಿನಿಮಾದ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಮಧುಚಂದ್ರ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಎ2 ಮ್ಯೂಸಿಕ್ ಚಾನಲ್‍ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
‘ಲಕ್ಷ್ಮಿ ನಿಮಾಸ’ ಧಾರಾವಾಹಿಯಲ್ಲಿ ಜಯಂತ್ ಪ್ರಾತ ಮಾಡಿ ಜನಪ್ರಿಯವಾಗಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್!?) ರಾಣಿ ಪಾತ್ರ ಮಾಡಿದ್ದಾರೆ. ಇದೊಂದು ಕ್ರೌಡ್ ಫಂಡೆಂಡ್ ಚಿತ್ರವಾಗಿದ್ದು, 100ಕ್ಕೂ ಹೆಚ್ಚು ಜನ ಈ ಚಿತ್ರದಲ್ಲಿ ಹಣ ತೊಡಗಿಸಿದ್ದಾರೆ.
ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೆಜ್ಜೆ ಇಡುವ ಸಾಮಾನ್ಯ ಯುವಕನೊಬ್ಬ, ಅನಿವಾರ್ಯವಾಗಿ ನಾಯಕಿಯಾಗುವ ಕಥೆ ಈ ಚಿತ್ರದಲ್ಲಿದೆ. ನಾಯಕಿಯಾಗಿ ದೀಪಕ್ ಸುಬ್ರಹ್ಮಣ್ಯ ಕಾಣಿಸಿಕೊಂಡಿರುವುದು ವಿಶೇಷ. ಹಾಗೆ ನಾಯಕಿಯಾದ ನಾಯಕನು ಚಿತ್ರರಂಗದಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ.
ಈ ಚಿತ್ರವನ್ನು ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣ ಮಾಡಲಾಗಿದ್ದು, ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ ಜೊತೆಗೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್, ಆನಂದ್ ನೀನಾಸಂ ಮುಂತಾದವರು ನಟಿಸಿದ್ದಾರೆ.
‘ಮಿಸ್ಟರ್ ರಾಣಿ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮಧುಚಂದ್ರ ಕಥೆ, ಚಿತ್ರಕಥೆಯನ್ನು ನಚಿಸಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣವಿದ್ದು, ಜ್ಯೂಡಾ ಸ್ಯಾಂಡಿ ಮತ್ತು ರಿತ್ವಿಕ್ ಮುರಳೀಧರ್ ಅವರ ಸಂಗೀತವಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ‘ಮಿಸ್ಟರ್ ರಾಣಿ’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.





