Mysore
20
overcast clouds
Light
Dark

ಪೋಟೋಗ್ರಾಫರ್ ಆದ ಧರ್ಮಣ್ಣ; ‘ಹಂಪಿ ಎಕ್ಸ್ಪ್ರೆಸ್‍’ ಚಿತ್ರಕ್ಕೆ ಹೀರೋ

‘ರಾಜಯೋಗ’ ಚಿತ್ರದ ನಂತರ ಮುಂದೇನು? ಈ ಪ್ರಶ್ನೆಯನ್ನು ಕಡೂರಿನ ಧರ್ಮಣ್ಣನನ್ನು ಹೋದಲ್ಲಿ ಬಂದಲ್ಲಿ ಜನ ಕೇಳುತ್ತಲೇ ಇದ್ದರು. ಏಕೆಂದರೆ, ಅಲ್ಲಿಯವರೆಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಧರ್ಮ, ‘ರಾಜಯೋಗ’ ಚಿತ್ರದ ಮೂಲಕ ಹೀರೋ ಆಗಿದ್ದರು. ಚಿತ್ರ ಕಳೆದ ವರ್ಷ ಬಿಡುಗಡೆಯೂ ಆಯಿತು. ಆದರೆ, ಅಷ್ಟೇನೂ ದೊಡ್ಡ ಯಶಸ್ಸು ಕಾಣಲಿಲ್ಲ. ಆದರೂ ಹೀರೊ ಆದ ನಟ ಕೆಳಗೆ ಇಳಿಯುವ ಹಾಗೂ ಇಲ್ಲ. ಹೀಗಿರುವಾಗಲೇ, ಅವರು ಇನ್ನೊಂದು ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುವುದಕ್ಕೆ ಸಜ್ಜಾಗಿದ್ದಾರೆ.

ಆ ಚಿತ್ರದ ಹೆಸರು ‘ಹಂಪಿ ಎಕ್ಸ್ಪ್ರೆಸ್‍’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಮುಗಿದಿದೆ. ಮುಹೂರ್ತ ಮುಗಿಸಿಕೊಂಡು ಚಿತ್ರತಂಡ ಸೀದಾ ಯೋಗರಾಜ್‍ ಭಟ್‍ ಅವರ ಆಫೀಸಿಗೆ ಹೋಗಿ, ಚಿತ್ರದ ಶೀರ್ಷಿಕೆಯನ್ನೂ ಅನಾವರಣಗೊಳಿಸಿದ್ದಾರೆ. ಈ ಚಿತ್ರಕ್ಕೆ ಪಾಟೀಲ್‍ ಲಿಂಗನಗೌಡ ಹರಪನಹಳ್ಳಿ ಎಂಬುವವರು ಕಥೆ, ಚಿತ್ರಕಥೆ ರಚಿಸುವುದರ ಜೊತೆಗೆ ಚಿತ್ರದ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನು ಹಂಪಿ ಟಾಕೀಸ್‍ ಬಳಗ ಈ ಚಿತ್ರವನ್ನು ನಿರ್ಮಿಸುತ್ತಿದೆ.

‘ಹಂಪಿ ಎಕ್ಸ್ಪ್ರೆಸ್‍’ ಚಿತ್ರದಲ್ಲಿ ಧರ್ಮಣ್ಣ ಕಡೂರು, ರಾಮ್‍ ನಾಡಗೌಡ, ಪದ್ಮಶ್ರೀ ಮಂಜಮ್ಮ ಜೋಗತಿ, ಮಹಾಂತೇಶ್‍ ಹೀರೇಮಠ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನು ಪ್ರಸಾದ್‍ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದ ಬಗ್ಗೆ ಚಿತ್ರತಂಡವು ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಕಾರಣ, ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಹಂಪಿ ಮತ್ತು ಆನೆಗುಂದಿ ಸುತ್ತಮುತ್ತ ನಡೆಯಲಿದೆಯಂತೆ.

ಇದೊಂದು ನೈಜ ಘಟನೆಯನ್ನು ಆಧರಿಸಿ ಮಾಡಿರುವ ಕಥೆ ಎನ್ನುವ ಧರ್ಮಣ್ಣ, ‘ಈ ಚಿತ್ರದಲ್ಲಿ ಎರಡು ಕಥೆಗಳಿವೆ. ಒಂದು ಕಥೆ ಒಬ್ಬ ಸ್ಕೂಲ್‍ ಮಾಸ್ಟರ್‍ನದ್ದಾದರೆ, ಇನ್ನೊಂದು ಕತೆ ಒಬ್ಬ ಫೋಟೋಗ್ರಾಫರ್‍ನದು. ನಾನು ಈ ಚಿತ್ರದಲ್ಲಿ ಫೋಟೋಗ್ರಾಫರ್‍ ಪಾತ್ರ ಮಾಡುತ್ತಿದ್ದೇನೆ. ಎರಡು ವಿಭಿನ್ನ ಕಥೆಗಳಿಂದ ಶುರುವಾಗುವ ಚಿತ್ರ ಕ್ರಮೇಣ ಒಂದೇ ಆಗುತ್ತದೆ’ ಎನ್ನುತ್ತಾರೆ ಧರ್ಮಣ್ಣ.