ಧರ್ಮ ಕೀರ್ತಿರಾಜ್ ಇತ್ತೀಚೆಗಷ್ಟೇ, ‘ತಲ್ವಾರ್’ ಎಂಬ ಚಿತ್ರದಲ್ಲಿ ರೌಡಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಪೊಲೀಸ್ ಇನ್‍ಸ್ಪೆಕ್ಟರ್ ಆಗಿದ್ದಾರೆ. ‘ಅಮರಾವತಿ ಪೊಲೀಸ್ ಸ್ಟೇಶನ್’ ಚಿತ್ರದಲ್ಲಿ ಒಂದಿಷ್ಟು ಜನರ ನಾಪತ್ತೆ ಮತ್ತು ಸಾವಿಗೆ ಕಾರಣರಾದವರ ಬೆನ್ನತ್ತಿ ಹೊರಟಿದ್ದಾರೆ.
ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಪಿ.ಪಿ.ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಆರ್. ಪ್ರದೀಪ್ ಕಮಲಪುರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಒಂದೂರಿನಲ್ಲಿ ಕೆಲವರು ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತಾರೆ. ಈ ಕೇಸ್ ಪತ್ತೆ ಹಚ್ಚುವುದಕ್ಕಾಗಿ ಬರುವ ಪೊಲೀಸ್ ಇನ್‍ಸ್ಪೆಕ್ಟರ್ ಸಹ ಕಾಣೆಯಾಗುತ್ತಾನೆ. ಇದೆಲ್ಲದರ ಹಿಂದೆ ಇರುವ ಮರ್ಮ ಏನೆಂಬುದನ್ನು ಹೇಳುವ ಚಿತ್ರವೇ ‘ಅಮರಾವತಿ ಪೊಲೀಸ್ ಸ್ಟೇಷನ್’. ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಆಗಿ ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ್ವಿಕ ಚಿತ್ರದ ನಾಯಕಿಯ ಪಾತ್ರ ಮಾಡಿದ್ದಾರೆ.
‘ಅಮರಾವತಿ ಪೊಲೀಸ್ ಸ್ಟೇಷನ್’ ಕುರಿತು ಮಾತನಾಡುವ ನಿರ್ದೇಶಕ ಪುನೀತ್, ‘ಈಗಾಗಲೇ ೩೬ ದಿನಗಳ ಕಾಲ ನಮ್ಮ ಚಿತ್ರದ ಶೇ.೯೦ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕ್ಲೈಮ್ಯಾಕ್ಸ್ ಹಾಗೂ ಹಾಡೊಂದರ ಶೂಟಿಂಗ್ ಮಾತ್ರವೇ ಬಾಕಿಯಿದೆ. ಅದನ್ನು ಗೋವಾ ಹಾಗೂ ಹಿಂದೂಪುರದಲ್ಲಿ ಚಿತ್ರೀಕರಿಸುವ ಪ್ಲಾನಿದೆ. ಅಲ್ಲದೆ ಮಾರ್ಚ್ ೧೭ರಂದು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ ನಮ್ಮ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುತ್ತಿದ್ದೇವೆ. ಮಾರ್ಚ್ ಕೊನೆಗೆ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ’ ಎಂದು ಹೇಳಿದರು.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಧರ್ಮ ಕೀರ್ತಿರಾಜ್, ‘ಈ ಚಿತ್ರದಲ್ಲಿ ನಾನು ಮಫ್ತಿಯಲ್ಲಿರುವ ಪೊಲೀಸ್ ಫಾತ್ರ ಮಾಡಿದ್ದೇನೆ. ಸಿನಿಮಾದಲ್ಲಿ ಆಕ್ಷನ್ ತುಂಬಾ ವಿಶೇಷವಾಗಿದೆ. ನಿರ್ದೇಶಕ ಪುನೀತ್ ಅವರು ಮಾಡಿಕೊಂಡಿದ್ದ ಕಥೆ ತುಂಬಾ ಚೆನ್ನಾಗಿದೆ’ ಎಂದು ಹೇಳಿದರು.
‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದಲ್ಲಿ ಹಿರಿಯ ನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ, ಗೌತಮ್ ಮಟ್ಟಿ ಅವರ ಛಾಯಾಗ್ರಹಣವಿದೆ.




