ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಮತ್ತು ‘ದಾಸರಹಳ್ಳಿ ಎಂಬ ಎರಡು ಚಿತ್ರಗಳು ಈಗಾಗಲೇ ಈ ವರ್ಷ ಬಿಡುಗಡೆಯಾಗಿದೆ. ಈ ಮಧ್ಯೆ, ಅವರ ಮೂರನೆಯ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜೂನ್ 20ರಂದು ಬಿಡುಗಡೆಯಾಗುತ್ತಿದೆ.
ಅಂದಹಾಗೆ, ಧರ್ಮ ಅಭಿನಯದ ಹೊಸ ಚಿತ್ರದ ಹೆಸರು ಬುಲೆಟ್. ಈ ಚಿತ್ರದ ಹಾಡು ಮತ್ತು ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ಸತ್ಯಜಿತ್ ಶಬ್ಬೀರ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದಕ್ಕೂ ಮೊದಲು ತೆಲುಗು , ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಶಬ್ಬೀರ್, ನಿರ್ದೇಶಿಸಿರುವ ಮೊದಲ ಚಿತ್ರವಿದು. ಜೊತೆಗೆ ಅವರು ಚಿತ್ರದಲ್ಲಿ ಧರ್ಮ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಸತ್ಯಜಿತ್, ‘ನಾನು ಭಾರತಿರಾಜ ಅವರ ನಿರ್ದೇಶನದ ‘ಪದಿನಾರು ವಯದಿನಿಲೆ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ಸಂಗೀತ ನಿರ್ದೇಶಕರಾದ ಇಳಯರಾಜ ಅವರು ಶಬ್ಬೀರ್ ಅಂತ ಇದ್ದ ನನ್ನ ಹೆಸರಿನ ಮುಂದೆ ಸತ್ಯಜಿತ್ ಎಂದು ಸೇರಿಸಿದರು. ಅಂದಿನಿಂದ ನನ್ನ ಹೆಸರು ಸತ್ಯಜಿತ್ ಶಬ್ಬೀರ್. ಇದುವರೆಗೂ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ 75 ಚಿತ್ರಗಳಲ್ಲಿ ನಟಿಸಿದ್ದೇನೆ. ಮೂಲತಃ ಕರ್ನಾಟಕದವನಾಗಿರುವ ನಾನು ಆನಂತರ ಚೆನ್ನೈ ಹಾಗೂ ಮುಂಬೈನಲ್ಲಿ ನೆಲೆಸಿದ್ದೆ. ಮೊದಲ ಚಿತ್ರವನ್ನು ಕನ್ನಡದಲ್ಲೇ ನಿರ್ಮಿಸಿ, ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ’ ಎಂದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನ್ನುವ ಅವರು, ‘ಚಿತ್ರತಂಡದ ಸಹಕಾರದಿಂದ ಒಂದೊಳ್ಳೆಯ ಚಿತ್ರ ಮೂಡಿಬಂದಿದೆ. ಇದೇ ಜೂನ್ 20ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಜಯದೇವ ಫಿಲಂಸ್ ಮೂಲಕ ಮರಿಸ್ವಾಮಿ ಅವರು ವಿತರಣೆ ಮಾಡಲಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಶಬ್ಬೀರ್.
ಧರ್ಮ ಕೀರ್ತಿರಾಜ್ ಮಾತನಾಡಿ, ‘ಸತ್ಯಜಿತ್ ಶಬ್ಬೀರ್ ಅವರ ನಿರ್ದೇಶನದಲ್ಲಿ ಉತ್ತಮ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ವರ್ಷದಲ್ಲಿ ನಾನು ನಾಯಕನಾಗಿ ನಟಿಸಿ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಇದು’ ಎಂದರೆ, ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟಿ ಭವ್ಯ ಹೇಳಿದರು.
ಚಿತ್ರದಲ್ಲಿ ಧರ್ಮ ಕೀರ್ತಿರಾಜ‍್‍ಗೆ ನಾಯಕಿಯಾಗಿ ಶ್ರೀಯಾ ಶುಕ್ಲ ನಟಿಸಿದ್ದಾರೆ. ಜೊತೆಗೆ ಹಿರಿಯ ನಟಿ ಭವ್ಯ, ಶೋಭರಾಜ್, ಶಿವ ಮುಂತಾದವರು ನಟಿಸಿದ್ದಾರೆ. ಇದು ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣದ 50ನೇ ಚಿತ್ರ. ರಾಜ್ ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ.





