Mysore
21
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಪೊಲೀಸ್‍ ಪಾತ್ರದಲ್ಲಿ ಧನ್ವೀರ್‍; ‘ಹಯಗ್ರೀವ’ ಚಿತ್ರದ ಪೋಸ್ಟರ್ ಬಿಡುಗಡೆ

ಕೋಲಾರದ ಶಾಸಕ ಸಮೃದ್ಧಿ ಮಂಜುನಾಥ್‍ ನಿರ್ಮಿಸುತ್ತಿರುವ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ ಚಿತ್ರವು ವರ್ಷದ ಆರಂಭದಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ರಾರಂಭವಾಗಿತ್ತು. ನಂತರ ಚಿತ್ರ ಏನಾಯ್ತೋ, ಸುದ್ದಿಯೇ ಇರಲಿಲ್ಲ. ಇದೀಗ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. ಅದಕ್ಕೂ ಮೊದಲು ಚಿತ್ರದ ಪೋಸ್ಟರ್‍ ಬಿಡುಗಡೆ ಆಗಿದೆ.

ಭಾನುವಾರ, ಧನ್ವೀರ್‍ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ಚಿತ್ರತಂಡವು ಧನ್ವೀರ್‍ಗೆ ಶುಭ ಕೋರಿ ಪೋಸ್ಟರ್ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಈ ಚಿತ್ರದಲ್ಲಿ ಏನಾಗಿರುತ್ತೀರಿ ಎಂಬ ಪ್ರಶ್ನೆಗೆ ಧನ್ವೀರ್‍ ಉತ್ತರಿಸಿರಲಿಲಲ್ಲ. ಇದೀಗ ಅವರು ಖಡಕ್‍ ಪೊಲೀಸ್‍ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುಳಿವನ್ನು ಆ ಪೋಸ್ಟರ್‍ ನೀಡಿದೆ.

ರಘುಕುಮಾರ್ ಓ.ಆರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ಸಹ ಮುಕ್ತಾಯವಾಗಲಿದೆ. ಈ ಮಧ್ಯೆ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್‍ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿರುವುದಾಗಿ ಧನ್ವೀರ್ ಮುಹೂರ್ತದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ‘ಇದು ನನ್ನ ಐದನೇ ಚಿತ್ರ. ಒಳ್ಳೆಯ ತಂಡ ಮತ್ತು ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್‍ ಮಾಡಿ, ಒಂದೊಳ್ಳೆಯ ಕಥೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. ಈ ಚಿತ್ರದಲ್ಲಿ ನೀಗ್ರೋಗಳ ಜೊತೆಗೆ ಫೈಟ್‍ ಇದೆ. ‘ಬಜಾರ್‍’ ನಂತರ ಸಿಕ್ಸ್ ಪ್ಯಾಕ್ ‍ಮಾಡಿಕೊಳ್ಳುತ್ತಿದ್ದೇನೆ. ಕಥೆ ಮತ್ತು ಪಾತ್ರ ಎರಡೂ ವಿಭಿನ್ನವಾಗಿದೆ’ ಎಂದು ಹೇಳಿದ್ದರು.

ಧನ್ವೀರ್‍ಗೆ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಮೇಶ್ ಭಟ್, ಶರತ್ ಲೋಹಿತಾಶ್ವ, ಶೋಭ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ಹಯಗ್ರೀವ’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ.‌ ಗಿರೀಶ್ ಆರ್ ಗೌಡ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

Tags:
error: Content is protected !!