ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಧನ್ಯತಾ ಅವರು ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮುಂದಿನ ಫೆಬ್ರವರಿಯಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಸಿದರು.
ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದುವೆಗೆ ಸಿದ್ದತೆಗಳು ನಡೆಯುತ್ತಿವೆ. ಮದುವೆಯ ಭಾಗವಾಗಿ ಲಗ್ನ ಪತ್ರಿಕೆ ಕೊಡಲು ಶುರುಮಾಡಿದ್ದೇನೆ. ಮೈಸೂರಿನಲ್ಲಿ ಮದುವೆ ನಡೆಯುತ್ತಿದೆ. ಎಲ್ಲರಿಗೂ ಲಗ್ನ ಪತ್ರಿಕೆ ಕೊಡುತ್ತೇನೆ. ಬಂದು ಆಶೀರ್ವಾದ ಮಾಡಿ ಎಂದು ತಿಳಿಸಿದರು.
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಫೆಬ್ರವರಿ.25 ಮತ್ತು 26ರಂದು ಮೈಸೂರಿನಲ್ಲಿ ನಡೆಯಲಿದೆ. ವಿಭಿನ್ನವಾಗಿ ಅಂಚೆ ಪತ್ರಿಕೆಯ ರೀತಿ ಮದುವೆ ಆಮಂತ್ರಣ ಪತ್ರಿಕೆ ತಯಾರು ಮಾಡಿಸಿದ್ದು, ಕೈ ಬರಹದ ಮೂಲಕ ಮದುವೆ ಕರೆಯೋಲೆ ಸಿದ್ಧಪಡಿಸಿರುವುದು ವಿಶೇಷವಾಗಿದೆ.