Mysore
28
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಈ ಹಾಡು ಮಾಡೋಕೆ ಆರು ತಿಂಗಳು ಬೇಕಾಯಿತಂತೆ

Darling Krishna

ಕೃಷ್ಣ ಅಭಿನಯದಲ್ಲಿ ಶಶಾಂಕ್‍, ‘ಬ್ರ್ಯಾಟ್‍’ ಎಂಬ ಪ್ಯಾನ್ ‍ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿಂದೆ ಶಶಾಂಕ್‍ ನಿರ್ದೇಶನದ ‘ಲವ್‍ 360’ ಚಿತ್ರಕ್ಕೆ ‘ಜಗವೇ ನೀನು…’ ಹಾಡಿದ್ದ ಸಿದ್‍ ಶ್ರೀರಾಮ್‍ ಈ ಹಾಡನ್ನೂ ಹಾಡಿದ್ದಾರೆ. ಅವರ ಜೊತೆಗೆ ‘ಸರಿಗಮಪ’ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದ ಲಹರಿ ಮಹೇಶ್‍ ಜೊತೆಯಾಗಿದ್ದಾರೆ. ಈ ಹಾಡು ಇದೀಗ ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನ ಕುರಿತು ಮಾತನಾಡುವ ಶಶಾಂಕ್‍, ಇದು ತಮ್ಮ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಸಮಯ ತೆಗೆದುಕೊಂಡು ಮಾಡಿದ ಹಾಡು ಎನ್ನುತ್ತಾರೆ. ‘ನನ್ನ ಹಾಗೂ ಅರ್ಜುನ್ ಜನ್ಯ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಅತೀ ಹೆಚ್ಚು ಜನಪ್ರಿಯವಾಗಿದೆ. ಈಗ ಆ ಸಾಲಿಗೆ ‘ನಾನೇ ನೀನಂತೆ…’ ಹಾಡು ಕೂಡ ಸೇರಲಿದೆ. ನನ್ನ ವೃತ್ತಿ ಜೀವನದಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿ ಬಂದಿರುವ ಮತ್ತು ಅತೀ ಹೆಚ್ಚು ಸಮಯ ತೆಗೆದುಕೊಂಡು ಮಾಡಿರುವ ಹಾಡಿದು. ಈ ಹಾಡಿನ ಟ್ಯೂನ್ ಅಂತಿಮಗೊಳಿಸಲು ಸುಮಾರು 6 ತಿಂಗಳ ಸಮಯ ಬೇಕಾಯಿತು. ಈ ಹಾಡು ಮಾಡುವ ಮೊದಲೇ ಇದನ್ನು ಸಿದ್‍ ಶ್ರೀರಾಮ್‍ ಅವರಿಂದ ಹಾಡಿಸಬೇಕೆಂದು ತೀರ್ಮಾನವಾಗಿತ್ತು. ಸಿದ್‍ ಅಲ್ಲದೆ ಶ್ರೇಯಾ ಘೋಶಾಲ್‍ ಅವರಿಂದ ಹಾಡಿಸುವ ಯೋಚನೆ ಇತ್ತು. ಅಷ್ಟರಲ್ಲಿ ಅರ್ಜುನ್‍ ಜನ್ಯ, ಕನ್ನಡದಲ್ಲೇ ಶ್ರೇಯಾ ಲೆವೆಲ್‍ಗೆ ಒಬ್ಬ ಗಾಯಕಿಯನ್ನು ಹುಡುಕಿರುವುದಾಗಿ ಹೇಳಿದರು. ನನಗೆ ಲಹರಿ ಮಹೇಶ್‍ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರನ್ನು ನೋಡಿದಾಗ, ನಿಜಕ್ಕೂ ಆಕೆ ಆ ಲೆವೆಲ್‍ಗೆ ಹಾಡುತ್ತಾರಾ ಎಂದನಿಸಿತು. ಆದರೆ, ಲಹರಿ ಅದ್ಭುತವಾಗಿ ಹಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕನ್ನಡ ಹಾಗೂ ತೆಲುಗಿನಲ್ಲಿ ಸಿದ್ ಶ್ರೀರಾಮ್ ಹಾಡಿದ್ದು, ಹಿಂದಿಯಲ್ಲಿ ಕನ್ನಡದ ಹುಡುಗ ನಿಹಾಲ್ ತಾರೋ, ತಮಿಳು ಮತ್ತು ಮಲೆಯಾಳಂನಲ್ಲಿ ಶ್ರೀಕಾಂತ್ ಹರಿಹರನ್ ಈ ಹಾಡನ್ನು ಹಾಡಿದ್ದಾರೆ‌. ಕನ್ನಡದಲ್ಲಿ ಲಹರಿ ಮಹೇಶ್ ಹಾಡಿದ್ದು ಉಳಿದ ನಾಲ್ಕು ಭಾಷೆಗಳಲ್ಲಿ ಹೆಣ್ಣು ಧ್ವನಿ ಸಿರೀಶ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಕನ್ನಡದಲ್ಲಿ ಈ ಹಾಡನ್ನು ನಾನೇ ಬರೆದಿದ್ದೇನೆ. ಆನಂದ್ ಆಡಿಯೋ ಮೂಲಕ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಸಹ ಬಿಡುಗಡೆಯಾಗಲಿದೆ. ಅಂದುಕೊಂಡ ಹಾಗೆ ಆದರೆ ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.

ನಾಯಕ ಕೃಷ್ಣ ಮಾತನಾಡಿ, ’ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ನಂತರ ನನ್ನ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರ ‘ಬ್ರ್ಯಾಟ್’. ಈ ಚಿತ್ರದಲ್ಲಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಲುಕ್‍ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ. ಮುಂದಿನ ತಿಂಗಳು ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಆ ಹಾಡಂತೂ ನನ್ನ ಮಗಳಿಗೆ ಬಹಳ ಇಷ್ಟ’ ಎಂದು ಹೇಳಿದರು.

ಈ ಹಿಂದೆ ‘ಫಸ್ಟ್ ರ‍್ಯಾಂಕ್ ರಾಜು’ ನಿರ್ಮಿಸಿದ್ದ ಮಂಜುನಾಥ್‍ ಕುಂದಕೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೃಷ್ಣಗೆ ನಾಯಕಿಯಾಗಿ ಮನಿಷಾ ಕುಂದುಕೂರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.

Tags:
error: Content is protected !!