ಮೂರು ತಿಂಗಳ ಹಿಂದೆ ಪ್ರಾರಂಭವಾಗಿದ್ದ ‘Congratulations ಬ್ರದರ್’ ಚಿತ್ರದ ಚಿತ್ರೀಕರಣ ಮುಗಿದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಪ್ರಾರಂಭವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಏಪ್ರಿಲ್ ತಿಂಗಳಲ್ಲಿ ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.
ಕಲ್ಲೂರ್ ಸಿನಿಮಾಸ್ ಮತ್ತು ಪೆನ್ ಎನ್ ಪೇಪರ್ ಸ್ಟುಡಿಯೋಸ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ ‘Congratulations ಬ್ರದರ್’ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದರೆ, ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ರಕ್ಷಿತ್ ನಾಗ್, ಸಂಜನಾ ದಾಸ್, ಅನುಶಾ, ಶಶಿಕುಮಾರ್ ಮುಂತಾದವರು ನಟಿಸಿದ್ದಾರೆ.
ಹುಡುಗರಿಗೆ ಹುಡುಗಿಯರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಕಾಲದಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಲ್ಲರೂ ‘Congratulations ಬ್ರದರ್’ ಎಂದು ಹೇಳುತ್ತಾರೆ. ಮುಂದೆ ಆತನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆಯಂತೆ. ಈ ಚಿತ್ರಕ್ಕಾಗಿ ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಹಿರಿಯ ನಟ ಶಶಿಕುಮಾರ್ ಮಾತನಾಡಿ, ‘ಚಿತ್ರ ಮಾಡುವಾಗ ಪಕ್ಕಾ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಅಂದುಕೊಂಡ ದಿನದಲ್ಲಿ ಹೆಚ್ಚು ಕಡಿಮೆ ಮುಗಿಸಿದರೆ ನಿರ್ಮಾಪಕರಿಗೂ ಅನುಕೂಲವಾಗಲಿದೆ. ನಾವೆಲ್ಲಾ ಚಿತ್ರರಂಗಕ್ಕೆ ಬಂದಾಗ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು. ಅಂತಹುದೇ ವಾತಾವರಣ ಚಿತ್ರರಂಗದಲ್ಲಿ ಬರಬೇಕು. ಈ ಚಿತ್ರದಲ್ಲಿ ನಾನು ನಾಯಕನ ತಂದೆಯ ಪಾತ್ರ ಮಾಡಿದ್ದೇನೆ. ಹರಿ ಸಂತೋಷ್ ನನಗೆ ಕಥೆ ಹೇಳಿದರು. ಕಥೆ ಚೆನ್ನಾಗಿದೆ. ಚಿತ್ರ ಕೂಡ ಎಲ್ಲರಿಗೂ ಪ್ರಿಯವಾಗಲಿದೆ’ ಎಂದರು.
‘Congratulations ಬ್ರದರ್’ ಚಿತ್ರಕ್ಕೆ ಗುರು ಛಾಯಾಗ್ರಹಣ ಮತ್ತು ಸೂರಜ್ ಜೋಯಿಸ್ ಸಂಗೀತವಿದೆ.





