Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಒಂದೇ ಚಿತ್ರದಲ್ಲಿ 3 ಪಾತ್ರ: ನಟ, ನಿರ್ದೇಶಕ, ನಿರ್ಮಾಪಕ ಚಂದನ್‍

ಅದ್ಯಾಕೋ ಗೊತ್ತಿಲ್ಲ, ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಯಾವೊಬ್ಬ ಪ್ರತಿಭಾವಂತ ನಟರು ಹಿರಿತೆರೆಯಲ್ಲಿ ದೊಡ್ಡ ಗೆಲುವು ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಜೆಕೆ, ವಿಜಯ್‍ ಸೂರ್ಯ ಮುಂತಾದವರು ಕಿರುತೆರೆಯಲ್ಲಿ ಅದೆಷ್ಟೇ ಜನಪ್ರಿಯತೆ ಸಂಪಾದಿಸಿದರೂ, ಹಿರಿತೆರೆಯಲ್ಲಿ ಅದೇ ಮ್ಯಾಜಿಕ್‍ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಈ ಸಾಲಿಗೆ ಚಂದನ್‍ ಸಹ ಸೇರುತ್ತಾರೆ.

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಚಂದನ್‍, ಕಳೆದ ಒಂದು ದಶಕದಲ್ಲಿ 9 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ನಟಿಸಿದ ಯಾವೊಂದು ಚಿತ್ರ ಸಹ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲಿಲ್ಲ. ಜೊತೆಗೆ, ಒಳ್ಳೆಯ ಅವಕಾಶಗಳೂ ಸಿಲಗಲಿಲ್ಲ. ಆರು ವರ್ಷಗಳ ಹಿಂದೆ ಬಿಡುಗಡೆಯಾದ ‘ಪ್ರೇಮ ಬರಹ’ ಚಿತ್ರ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸಿದ್ದ ಚಂದನ್‍, ಅದ್ಯಾಕೋ ಆ ನಂತರ ಯಾವೊಂದು ಚಿತ್ರದಲ್ಲೂ ಹೀರೋ ಆಗಿ ನಟಿಸಿರಲಿಲ್ಲ. ಇದೀಗ ಅವರು ಹೊಸ ಚಿತ್ರವೊಂದರಲ್ಲಿ ಹೀರೊ ಆಗುವ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.

ಇತ್ತೀಚೆಗೆ ಚಂದನ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಚಂದನ್‍ ಬರೀ ನಾಯಕನಷ್ಟೇ ಅಲ್ಲ, ನಿರ್ಮಾಪಕ ಮತ್ತು ನಿರ್ದೇಶಕರೂ ಹೌದು. ಎವರೆಸ್ಟ್ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಚಂದನ್, ಅದರಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರವನ್ನು ನಿರ್ದೇಶಿಸಿ, ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಚಂದನ್‍ ಹೊಸ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸಿ, ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಬಿಟ್ಟರೆ, ಚಿತ್ರದ ಕುರಿತು ಯಾವ ವಿಷಯವನ್ನೂ ಬಹಿರಂಗಪಡಿಸಿಲ್ಲ. ಸದ್ಯಕ್ಕೆ ಹುಟ್ಟುಹ್ಬದಂದು ಚಿತ್ರದ ಮೇಕಿಂಗ್‍ ವೀಡಿಯೋ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಈ ಹೆಸರಿಡದ ಚಿತ್ರದಲ್ಲಿ ಚಂದನ್‍ಗೆ ನಾಯಕಿಯಾಗಿ ನಿಮಿಕಾ ರತ್ನಾಕರ್‍ ನಟಿಸುತ್ತಿದ್ದು, ಮಿಕ್ಕಂತೆ ಸಾಧು ಕೋಕಿಲ, ಶ್ರುತಿ, ಅವಿನಾಶ್‍, ಗಿರಿ ಶಿವಣ್ಣ ಮುಂತಾದವರು ನಟಿಸುತ್ತಿದ್ದು, ಎಚ್.ಸಿ. ವೇಣು ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್ ಸಂಗೀತ ಈ ಚಿತ್ರಕ್ಕಿದೆ.

Tags: