ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರಾದರು. ಪ್ರೀತಿಸಿ ಮದುವೆಯಾದವರು, ನಾಲ್ಕು ವರ್ಷದ ದಾಂಪತ್ಯ ಮುಗಿಸಿ ಪರಸ್ಪರ ದೂರಾದರು. ಈಗ ಪುನಃ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದು ಹೊಸ ಚಿತ್ರವೊಂದಕ್ಕಾಗಿ.
ಚಂದನ್ ಮತ್ತು ನಿವೇದಿತಾ ಒಟ್ಟಿಗೆ ಇದ್ದ ಕಾಲಕ್ಕೆ ಜೊತೆಯಾಗಿ ‘ಮುದ್ದು ರಾಕ್ಷಸಿ’ ಎಂಬ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಚಿತ್ರದ ಬಹುತೇಕ ಚಿತ್ರೀಕರಣವೂ ಆಗಿತ್ತು. ಆದರೆ, ಚಿತ್ರ ಬಿಡುಗಡೆ ಆಗುವುದಕ್ಕೆ ಮೊದಲೇ ಇಬ್ಬರೂ ದೂರಾದರು. ಈಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆದಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಚಂದನ್ ಮತ್ತು ನಿವೇದಿತಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಂಜನಾಪುರದಲ್ಲಿರುವ ವಜ್ರಮುನಿ ಎಸ್ಟೇಟ್‍ನಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಚಂದನ್ ಮತ್ತು ನಿವೇದಿತಾ ಇಬ್ಬರೂ ವಿದಾಯ ಹೇಳುವ ಸನ್ನಿವೇಶವನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ವಿಚ್ಛೇದನ ನಂತರ ಮೊದಲ ಬಾರಿಗೆ ಚಂದನ್, ನಿವೇದಿತಾ ಮುಖಾಮುಖಿಯಾದರು. ಈ ಸಂದರ್ಭದಲ್ಲಿ ಗ್ಲಿಸರಿನ್ ಹಾಕದಿದ್ದರೂ ನಿವೇದಿತಾ ಕಣ್ಣಂಚಲ್ಲಿ ನೀರು ತುಂಬಿಬಂದಿತ್ತು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿವೇದಿತಾ, ‘ಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ಆ ದೃಶ್ಯ ಸಹ ಬಹಳ ಎಮೋಷನಲ್ ಆಗಿದೆ. ನಮ್ಮಿಬ್ಬರಲ್ಲೂ ಒಂದೊಳ್ಳೆಯ ಬಂಧವಿತ್ತು. ಹಾಗಾಗಿ, ಸಹಜವಾಗಿಯೇ ಅಳು ಬಂತು’ ಎಂದು ಹೇಳಿದರು.
‘ಮುದ್ದು ರಾಕ್ಷಸಿ’ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಈ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಎ.ಕರುಣಾಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.





