ಸೂರ್ಯ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ‘ಕಂಗುವಾ’, ಅಕ್ಟೋಬರ್ 10ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರದ ಅಂತಿಮ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಚಿತ್ರದ ಪ್ರಚಾರ ಶುರುವಾಗಲಿದೆ. ಈ ಮಧ್ಯೆ, ಚಿತ್ರದಲ್ಲಿ ಸೂರ್ಯ ಸಹೋದರ ಕಾರ್ತಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ದೊಡ್ಡ ಸುದ್ದಿ ಬಂದಿದೆ.
ಸೂರ್ಯ ಮತ್ತು ಕಾರ್ತಿ ಬಹಳ ವರ್ಷಗಳಲ್ಲಿ ತಮಿಳು ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಯಾವತ್ತೂ ಜೊತೆಯಾಗಿ ನಟಿಸಿರಲಿಲ್ಲ. ಹಾಗೆ ನಟಿಸುವುದಕ್ಕೆ ಅವಕಾಶವೂ ಸಿಕ್ಕಿರಲಿಲ್ಲವೆನ್ನಿ. ಈಗ ‘ಕಂಗುವಾ’ ಚಿತ್ರದಲ್ಲಿ ಸೂರ್ಯ ನಾಯಕನಾದರೆ, ಕಾರ್ತಿ ವಿಲನ್ ಆಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂರ್ಯ ಮತ್ತು ಕಾರ್ತಿ ಜೊತೆಯಾಗಿ ನಟಿಸುತ್ತಿರುವ ವಿಷಯವನ್ನು ಚಿತ್ರತಂಡ ಇದುವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುವ ಚಿತ್ರದ ಗೀತರಚನೆಕಾರರಾದ ವಿವೇಕ, ಕಾರ್ತಿ ಸಹ ‘ಕಂಗುವ’ ಚಿತ್ರದಲ್ಲಿ ನಟಿಸಿರುವ ಸುಳಿವು ನೀಡಿದ್ದಾರೆ.

ಸೂರ್ಯ ಮತ್ತು ಕಾರ್ತಿಯನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ತೋರಿಸಬೇಕು ಎಂಬುದು ಹಲವು ನಿರ್ದೇಶಕರ ಕನಸಾಗಿತ್ತು. ಆದರೆ, ಅಂಥದ್ದೊಂದು ಅವಕಾಶ ಇದುವರೆಗೂ ಕೂಡಿಬಂದಿರಲಿಲ್ಲ. ಈಗ ನಿರ್ದೇಶಕ ಶಿವಗೆ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ಅವರು ‘ಕಂಗುವ’ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ‘ಕಂಗುವ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಬಾಲಿವುಡ್ ನಟರಾದ ದಿಶಾ ಪಠಾಣಿ ಮತ್ತು ಬಾಬ್ಬಿ ಡಿಯೋಲ್ ಇಬ್ಬರೂ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ದಿಶಾ ಕಾಣಿಸಿಕೊಂಡರೆ, ವಿಲನ್ ಆಗಿ ಬಾಬ್ಬಿ ಡಿಯೋಲ್ ಇದ್ದಾರೆ. ಜೊತೆಗೆ ಜಗಪತಿ ಬಾಬು, ಯೋಗಿ ಬಾಬು, ಆನಂದರಾಜ್, ರೆಡಿನ್ ಕಿಂಗ್ಸ್ಲೇ ಮುಂತಾದವರು ನಟಿಸಿದ್ದಾರೆ. 300 ಕೋಟಿ ರೂ ಬಜೆಟ್‍ನ ಈ ಚಿತ್ರವನ್ನು ಕರ್ನಾಟಕದಲ್ಲಿ ಕೆ.ವಿ.ಎನ್. ಪ್ರೊಡಕ್ಷನ್ಸ್ ಸಂಸ್ಥೆಯು ನಿರ್ಮಿಸುತ್ತಿದೆ.





