ಬಾಲಿವುಡ್‍ನ ಜನಪ್ರಿಯ ನಟರಾದ ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಅವರನ್ನು ಒಂದೇ ಚಿತ್ರದಲ್ಲಿ ಒಟ್ಟಿಗೆ ನೋಡಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಬರೀ ಅಭಿಮಾನಿಗಳಷ್ಟೇ ಅಲ್ಲ, ಮೂವರನ್ನೂ ಒಟ್ಟಿಗೆ ತೆರೆಯ ಮೇಲೆ ತರಬೇಕು ಎಂಬುದು ಹಲವು ನಿರ್ಮಾಪಕರು ಮತ್ತು ನಿರ್ದೇಶಕರ ಆಸೆ.
ಈಗ ಮೂವರೂ ಖಾನ್‍ಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ. ಈ ವಿಷಯವನ್ನು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಫಿಲ್ಮ್ ಫೆಸ್ಟಿವಲ್‍ನಲ್ಲಿ ಭಾಗವಹಿಸಿ ಮಾತನಾಡಿರುವ ಆಮೀರ್, ಮೂವರು ಖಾನ್‍ಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಆಮೀರ್, ‘ಸುಮಾರು ಆರು ತಿಂಗಳ ಹಿಂದೆ ನಾವು ಮೂವರು, ಒಟ್ಟಿಗೆ ಭೇಟಿಯಾಗಿದ್ದೆವು. ಈ ಸಂದರ್ಭದಲ್ಲಿ, ನಾವು ಮೂವರು ಒಟ್ಟಿಗೆ ಚಿತ್ರ ಮಾಡದಿದ್ದರೆ ಅಭಿಮಾನಿಗಳಿ ಮೋಸ ಮಾಡಿದಂತಾಗುತ್ತದೆ, ನಾವು ಒಟ್ಟಿಗೆ ನಟಿಸಿದರೆ ಹೇಗೆ ಎಂದು ಕೇಳಿದೆ. ಅವರಿಬ್ಬರೂ ಒಪ್ಪಿದರು. ಒಟ್ಟಿಗೆ ಕೆಲಸ ಮಾಡೋಣ ಎಂದು ಆಶ್ವಾಸನೆ ನೀಡಿದರು. ನಾವು ಒಟ್ಟಿಗೆ ನಟಿಸಬೇಕು ಎಂದರೆ, ಅದಕ್ಕೊಂದು ಸೂಕ್ತವಾದ ಕಥೆ ಬೇಕು. ಅಂತಹ ಕಥೆಯ ಹುಡುಕಾಟದಲ್ಲಿ ನಾವಿದ್ದೇವೆ’ ಎಂದು ಆಮೀರ್ ಹೇಳಿದ್ದಾರೆ.
ಅಂದ ಹಾಗೆ, ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಮೂವರೂ ಅನಂತ್ ಅಂಬಾನಿ ಮದುವೆಯಲ್ಲಿ ‘ನಾಟ್ಟು ನಾಟ್ಟು’ ಹಾಡಿಗೆ ಹೆಜ್ಜೆ ಹಾಕಿದ್ದರು. ಮೂವರು ಒಟ್ಟಿಗೆ ಹೆಜ್ಜೆ ಹಾಕುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು.
ಈ ಹಿಂದೆ, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್, ‘ಅಂದಾಜ್ ಅಪ್ನಾ ಅಪ್ನಾ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಾರೂಖ್ ಖಾನ್ ಮತ್ತು ಸಲ್ಮಾನ್, ‘ಕರಣ್ ಅರ್ಜುನ್’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಆಮೀರ್ ಮತ್ತು ಶಾರೂಖ್ ಖಾನ್ ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಹಾಗೆಯೇ, ಮೂವರೂ ಒಟ್ಟಿಗೆ ನಟಿಸಿರಲಿಲ್ಲ. ಈಗ ಅದು ಸಾಧ್ಯವಾಗುತ್ತದೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.