Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮಲಯಾಳಂಗೆ ಹೊರಟ ಭರತ್‍ ಬೋಪಣ್ಣ; ‘ಬ್ರೊಮ್ಯಾನ್ಸ್’ನಲ್ಲಿ ವಿಲನ್

ಅರುಣ್‍ ವಿಜಯ್‍ ಅಭಿನಯದ ‘ಮಿಷನ್‍: ಚಾಪ್ಟರ್ 1’ ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಹೋಗಿದ್ದ ಕನ್ನಡಿಗ ಭರತ್‍ ಬೋಪಣ್ಣ, ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೊರಟಿದ್ದಾರೆ. ಭರತ್‍ ಅಭಿನಯದ ಮೊದಲ ಚಿತ್ರ ‘ಬ್ರೊಮ್ಯಾನ್ಸ್’ ಮುಹೂರ್ತ ಇತ್ತೀಚೆಗಷ್ಟೇ ಮುಗಿದಿದೆ.

ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಡೆಮೋ ಪೀಸ್‍’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಭರತ್. ನಂತರ, ವಿಜಯ್ ಸಂಕೇಶ್ವರ್ ಅವರ ಜೀನವನ್ನಾಧರಿಸಿದ ‘ವಿಜಯಾನಂದ್’ ಚಿತ್ರದಲ್ಲಿ ಅವರ ಮಗ ಆನಂದ್‍ ಸಂಕೇಶ್ವರ್ ಪಾತ್ರ ಮಾಡಿದ್ದರು. ಆ ನಂತರ ಭರತ್‍ ಇನ್ನೊಂದೆರಡು ಕನ್ನಡ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ತಮಿಳಿಗೂ ಹೋಗಿದ್ದರು. ಅಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಭರತ್‍, ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್‍ ಅಶೋಕನ್‍, ಮ್ಯಾಥ್ಯೂ ಥಾಮಸ್‍ ಮತ್ತು ಮಹಿಮಾ ನಂಬಿಯಾರ್ ನಟಿಸುತ್ತಿರುವ ‘ಬ್ರೊಮ್ಯಾನ್ಸ್’ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಜೋ ಆ್ಯಂಡ್‍ ಜೋ’ ಮತ್ತು ‘18+’ ಚಿತ್ರಗಳನ್ನು ನಿರ್ದೇಶಿಸಿದ್ದ ಅರ್ಜುನ್‍ ಡಿ ಜೋಸ್ ಈ ಚಿತ್ರದ ನಿರ್ದೇಶಕರು. ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಕೇರಳದಲ್ಲಿ ಸರಳವಾಗಿ ಆಗಿದ್ದು, ಚಿತ್ರತಂಡದವರು ಸೋಷಿಯಲ್‍ ಮೀಡಿಯಾ ಮೂಲಕ ಮುಹೂರ್ತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಬ್ರೊಮ್ಯಾನ್ಸ್’ ಒಂದು ಫ್ಯಾಮಿಲಿ ಚಿತ್ರವಾಗಿದ್ದು, ಇತ್ತೀಚೆಗೆ ವಿಶು ಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಅಂದಹಾಗೆ, ಚಿತ್ರದ ಕಥೆಯೇನು ಮತ್ತು ಚಿತ್ರದಲ್ಲಿ ಭರತ್ ಪಾತ್ರವೇನು ಎಂಬ ವಿಷಯವನ್ನು ಗೌಪ್ಯವಾಗಿಡಲಾಗಿದೆ.

Tags:
error: Content is protected !!